ನಾಪೋಕ್ಲು ಸೆ.25 : ಗೌರಿ-ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಶ್ರದ್ಧಾಭಕ್ತಿಯಿಂದ ವಿಸರ್ಜಿಸಲಾಯಿತು.
ಗೌರಿ-ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸಲು ಐದು ಸೇವಾ ಸಮಿತಿಗಳ ವತಿಯಿಂದ ತಯಾರಿ ನಡೆಸಿದ್ದು, ಸೆ.19 ರಂದು ಗಣೇಶ ಚತುರ್ಥಿಯಂದು ಸಂತೆ ಮೈದಾನದಿಂದ ಅಲಂಕೃತ ವಾಹನಗಳಲ್ಲಿ ಗೌರಿ ಗಣೇಶಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಇಂದಿರಾನಗರದ ವಿವೇಕಾನಂದ ಸೇವಾ ಸಮಿತಿ,ರಾಮಟ್ರಸ್ಟ್ ಗಣೇಶೋತ್ಸವ ಸಮಿತಿ, ಪೊನ್ನುಮುತ್ತಪ್ಪ ದೇವಾಲಯದ ವಿನಾಯಕ ಸೇವಾ ಸಮಿತಿ, ನಾಪೋಕ್ಲು ನಾಡು ಗೌರಿ-ಗಣೇಶ ಸಮಿತಿ ಹಾಗೂ ಕಕ್ಕುಂದಕಾಡಿನ ಗಣೇಶೋತ್ಸವ ಸೇವಾಸಮಿತಿ ವತಿಯಿಂದ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿ ಕೊಂಡೊಯ್ದು ಸಂಜೆ ವಿಸರ್ಜಿಸಲಾಯಿತು.
ಗೌರಿ-ಗಣೇಶಮೂರ್ತಿಗಳ ವಿಸರ್ಜನೆ ಸಂದರ್ಭ ವಿವಿಧ ಸೇವಾ ಸಮಿತಿಗಳು ಆಯೋಜಿಸಿದ ಮನೋರಂಜನಾ ಕಾರ್ಯಕ್ರಮದಲ್ಲಿ ಪುತ್ತೂರಿನ ಶಬರಿ ತಂಡದವರಿಂದ ನಾಸಿಕ್ ಬ್ಯಾಂಡ್, ಶ್ರೀ ಶಾರದಾ ಆರ್ಟ್ಸ್ ಜನಪದ ಗೊಂಬೆ ಬಳಗದಿಂದ ವಿವಿಧ ಆಕರ್ಷಕ ಕೀಲು ಬೊಂಬೆಯಾಟ ವಿಟ್ಲ ತಂಡದವರಿಂದ ಬೃಹತ್ ಗಾತ್ರದ ಆಂಜನೇಯ, ಚಲಿಸುವ ಮೂರ್ತಿಗಳೊಂದಿಗೆ ವಿಭಿನ್ನ ರೀತಿಯಲ್ಲಿ ವಿಘ್ನೇಶ್ವರನ ಕಥಾ ಸಂಕಲನ, ಸಿಡಿಮದ್ದಿನ ಚಿತ್ತಾರ, ವಿಶೇಷ ಅಲಂಕೃತ ಮಂಟಪಗಳೊಂದಿಗೆ ಮಹಿಳೆಯರು ಮಕ್ಕಳಾದಿಯಾಗಿ ಸಾರ್ವಜನಿಕರು ಕುಣಿದು ಕುಪ್ಪಲಿಸಿ ಸಂಭ್ರಮಿಸಿದರು.
ಮೆರವಣಿಗೆ ಸಂದರ್ಭ ಪಟ್ಟಣದಲ್ಲಿ ವಿಘ್ನೇಶನಿಗೆ ನೂರಾರು ಈಡು ಕಾಯಿ ಒಡೆಯಲಾಯಿತು. ಹಾಗೂ ಭಕ್ತಾದಿಗಳು ಹಣ್ಣುಕಾಯಿ ಸೇವೆಯನ್ನು ಸಮರ್ಪಿಸಿದರು. ಮೆರವಣಿಗೆಯಲ್ಲಿ ವಿವಿಧ ಉತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಸಾರ್ವಜನಿಕರು ಅಧಿಕಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಡಿವೈಎಸ್ ಪಿ ಜಗದೀಶ್, ವೃತ್ತ ನಿರೀಕ್ಷಕ ಅನುಪ್ ಮಾದಪ್ಪ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಪಟ್ಟಣದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಬಿಗಿ ಪೋಲಿಸ್ ಬಂದಬಸ್ತು ನಿಯೋಜಿಸಲಾಗಿತ್ತು.
ವರದಿ : ದುಗ್ಗಳ ಸದಾನಂದ.









