ನಾಪೋಕ್ಲು ಸೆ.25 : ಕಾನೂನು ಬಾಹಿರ ಚಟುವಟಿಕೆಗಳು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಅಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು ಎಂದು ನಾಪೊಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕುರಿತು ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಂದೆ-ತಾಯಿಗಳು ತಮಗಾಗಿ ಏನು ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಮುಂದುವರಿಯಬೇಕು. ಮಾದಕ ವಸ್ತುಗಳ ಸೇವನೆಯಿಂದ ದೈಹಿಕವಾಗಿ, ಮಾನಸಿಕವಾಗಿ ಹಲವು ತೊಂದರೆಗಳು ಉಂಟಾಗುತ್ತವೆ. ಉತ್ತಮ ಗೆಳೆಯರೊಂದಿಗೆ ಮಾತ್ರ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಹಾಗೂ ಅದನ್ನು ತಡೆಗಟ್ಟುವ ಕುರಿತು ಮಾಹಿತಿ ನೀಡಿದ ಅವರು ತಾರುಣ್ಯಾವಸ್ಥೆಯಲ್ಲಿ ತಮ್ಮನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ತಿಳಿಸಿದರು. ಮೊಬೈಲ್ ಬಳಸುವುದರಿಂದ ಹಲವು ಸಂದರ್ಭಗಳಲ್ಲಿ ಅನಾಹುತಗಳಾಗುತ್ತಿದ್ದು, ಮಿತವಾಗಿ ಮೊಬೈಲ್ ಬಳಕೆ ಮಾಡಬೇಕು.18 ವರ್ಷದೊಳಗಿನ ಯಾರೂ ವಾಹನ ಚಲಾಯಿಸಬಾರದು ಹಾಗೂ ಟ್ರಾಫಿಕ್ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕ ಬಿದ್ದಾಟಂಡ ಮುದ್ದಯ್ಯ ಕೊಂಬಂಡ ಗಣೇಶ ನಿವೃತ ಪ್ರೊ.ಕಲ್ಯಾಟಂಡ ಪೂಣಚ್ಚ ಹಾಗೂ ಸಂಸ್ಥೆಯ ಮುಖ್ಯ ಶಿಕ್ಷಕಿ ಕಲ್ಯಾಟಂಡ ಶಾರದಾ ಅಪ್ಪಣ್ಣ ಹಾಜರಿದ್ದರು.
ವಿದ್ಯಾರ್ಥಿಗಳಾದ ವರ್ಷ ಎ.ಎಸ್ ಹಾಗೂ ದೀಕ್ಷ ಪ್ರಾರ್ಥನೆಗೈದ ಕಾರ್ಯಕ್ರಮದಲ್ಲಿ
ಶಾರದಾ ಅಪ್ಪಣ್ಣ ಸ್ವಾಗತಿಸಿದರು. ಶಿಕ್ಷಕ ಮೂಡೆರ ಕಾಳಯ್ಯ ಅತಿಥಿ ಪರಿಚಯ ಮಾಡಿ ಶಿಕ್ಷಕ ಅಂಬ್ರಾಟಿ .ಟಿ.ಭಗವತಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. .
ವರದಿ : ದುಗ್ಗಳ ಸದಾನಂದ








