ಮಡಿಕೇರಿ ಸೆ.25 : ನಗರದ ಹೃದಯ ಭಾಗ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಂಚಾರಿ ವ್ಯವಸ್ಥೆಗೆ ವೈಜ್ಞಾನಿಕ ರೂಪ ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಅಪಘಾತದಿಂದ ಹಾನಿಗೊಳಗಾಗಿರುವ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪುನರ್ ಪ್ರತಿಷ್ಠಾಪನೆಗೂ ಮೊದಲು ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ತಿಮ್ಮಯ್ಯ ವೃತ್ತಕ್ಕೆ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸುಗಮ ಸಂಚಾರ ವ್ಯವಸ್ಥೆಯ ಕುರಿತು ಚರ್ಚಿಸಿದರು.
ಅಪಘಾತದಿಂದ ಹಾನಿಗೊಳಗಾಗಿರುವ ಡಿವೈಡರ್ ಗಳನ್ನು ಶೀಘ್ರ ತೆರವುಗೊಳಿಸಲಾಗುವುದು. ಬಾರಿಕೇಡ್ ಬಳಸಿ ವಾಹನಗಳ ಸಂಚಾರದ ಬಗ್ಗೆ ಅವಲೋಕಿಸಲಾಗುವುದು. ನಂತರ ಇಂಜಿನಿಯರ್ ಗಳ ಸಲಹೆ ಪಡೆದು ವೈಜ್ಞಾನಿಕ ರೂಪದಲ್ಲಿ ವೃತ್ತ ನಿರ್ಮಿಸಿ ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಸ್ಪಷ್ಟಪಡಿಸಿದರು.
ಅಕ್ಟೋಬರ್ 2ನೇ ವಾರದಿಂದ ಐತಿಹಾಸಿಕ ಮಡಿಕೇರಿ ದಸರಾ ಆರಂಭಗೊಳ್ಳುವುದರಿಂದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲಾಗುವುದು. ನಗರಕ್ಕೆ ಪ್ರವೇಶ ಕಲ್ಪಿಸುವ ಮುಖ್ಯ ವೃತ್ತ ಇದಾಗಿರುವುದರಿಂದ ಮೊದಲು ಬ್ಯಾರಿಕೇಡ್ ಬಳಸಿ ಡೆಮೋ ಮೂಲಕ ಸಂಚಾರಿ ವ್ಯವಸ್ಥೆಯನ್ನು ಖಾತರಿಪಡಿಸಿಕೊಳ್ಳಲಾಗುವುದು. ನಂತರ ಡಿವೈಡರ್ ನಿರ್ಮಾಣದ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಅಪಘಾತದಿಂದ ಹಾನಿಗೊಳಗಾಗಿರುವ ಡಿವೈಡರ್ ಗಳನ್ನು ಇನ್ನೆರೆಡು ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು.
ದಸರಾಕ್ಕೂ ಮೊದಲು ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕೆ ಎಸ್.ಸಿ.ಸತೀಶ್, ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಸಂಚಾರಿ ಠಾಣಾಧಿಕಾರಿ ಶ್ರೀಧರ್, ಎಎಸ್‌ಐ ಪಿ.ನಂದ ಈ ಸಂದರ್ಭ ಹಾಜರಿದ್ದರು.










