ಸಿದ್ದಾಪುರ ಸೆ.25 : ಶಾಂತಿ ಸಹ ಬಾಳ್ವೆ ಸಹೋದರತ್ವ ಸಾರುವ ಮಹಮ್ಮದ್ ಪೈಗಂಬರ್ ಅವರ ಸಂದೇಶವನ್ನು
ಹಂಚಿಕೊಳ್ಳಲು ಸುನ್ನಿ ಯುವಜನ ಸಂಘಟನೆ ಜಿಲ್ಲೆಯಾದಂತ ಸಂದೇಶ ಜಾಥವನ್ನು ಹಮ್ಮಿಕೊಳ್ಳಲಾಗಿದೆ
ಎಂದು ಕಕ್ಕಿಂಜೆಯ ಅಬ್ದುಲ್ ರಶೀದ್ ಝೈನಿ ಹೇಳಿದರು.
ಸುನ್ನಿ ಯುವಜನ ಸಂಘದ ವತಿಯಿಂದ ಸಿದ್ದಾಪುರದಲ್ಲಿ ನಡೆದ ಈದ್ ಮಿಲಾದ್ ಸಂದೇಶ ಸಾರುವ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಸುನ್ನಿ ಯುವಜನ ಸಂಘಟನೆ ಪ್ರವಾದಿಯವರ ಸಂದೇಶ ಸಾರುವ ಮೂಲಕ ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು,
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್.ಎಸ್.ಎಫ್ ಸಂಘಟನೆಯ ಸಂಚಾಲಕ ಕೆ.ಎಂ.ಬಾವ ಮಾತನಾಡಿ, ಮಿಲಾದ್ ಸಂದೇಶ ಜಾಥ ಜಿಲ್ಲೆಯ ಗೋಣಿಕೊಪ್ಪಲು, ವಿರಾಜಪೇಟೆ, ನಾಪೋಕ್ಲು, ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಸಂಚರಿಸಲಿದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಜುಬೈರ್ ಸಾಹದಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ, ಹಂಸ , ಅಶ್ರಫ್ ಸೇರಿದಂತೆ ಸಂಘಟನೆ ಕಾರ್ಯಕರ್ತರು ಹಾಗೂ ಮುಖಂಡರುಗಳು ಹಾಜರಿದ್ದರು.
ಸಂದೇಶ ಜಾಥದಲ್ಲಿ ಜಿಲ್ಲೆಯ ನಾನಾ ಭಾಗ ಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು
ವಿದ್ಯಾರ್ಥಿಗಳ ದಫ್ ಪ್ರದರ್ಶನ ಗಮನ ಸೆಳೆಯಿತು.








