ಮಡಿಕೇರಿ ಸೆ.25 : ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯು ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಎಸ್‍ಪಿ, ಶಿಕ್ಷಣದಿಂದ ಮಾನಸಿಕ ಬಲ ಮತ್ತು ಕ್ರೀಡೆಯಿಂದ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಹಾಗೂ ಅಂತರರಾಷ್ಟ್ರೀಯ ಕರಾಟೆಪಟು ಜಮ್ಮಡ ಜಯ ಜೋಯಪ್ಪ, ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ರಕ್ಷಣೆಗಾಗಿ ಕರಾಟೆ ಅತ್ಯವಶ್ಯಕ. ಕರಾಟೆಯನ್ನು ಕರಗತ ಮಾಡಿಕೊಂಡರೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಖ್ಯಾತಿ ಗಳಿಸಲು ಅವಕಾಶವಿದೆ ಎಂದರು.
ಶಿಕ್ಷಣ ಇಲಾಖೆ ಕ್ರೀಡಾ ಮುಖ್ಯಸ್ಥ ಡಾ.ಸದಾಶಿವಯ್ಯ ಪಲ್ಲೆದ್ ಮಾತನಾಡಿ, ಇಲಾಖೆ ನಡೆಸುವ ಕ್ರೀಡಾಕೂಟಗಳ ಕುರಿತು ಮಾಹಿತಿ ನೀಡಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ಅಧ್ಯಕ್ಷ ಸೆನ್ಸಾಯಿ ಅರುಣ್, ಮಡಿಕೇರಿ ತಾಲೂಕು ಕ್ರೀಡಾ ಮುಖ್ಯಸ್ಥ ಶ್ರೀನಿವಾಸ್, ಅಖಿಲ ಕರ್ನಾಟಕ ಕರಾಟೆ ಸಂಸ್ಥೆಯ ಕಾರ್ಯದರ್ಶಿ ರೇಖಾ ಬೋಪಣ್ಣ, ಮಾದಾಪುರ ಚನ್ನಮ್ಮ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚೆಯ್ಯಂಡ ಪವನ್ ಮಂದಪ್ಪ ಉಪಸ್ಥಿತರಿದ್ದರು.
ಮೈಸೂರು ಕರಾಟೆ ಅಸೋಸಿಯೇಷನ್ ನ ಸೆನ್ಸಾಯಿ ದೀಪಕ್ ಹಾಗೂ ತಂಡ ಪಂದ್ಯಾವಳಿಯ ತೀರ್ಪುಗಾರಿಕೆ ನಡೆಸಿಕೊಟ್ಟರು.
ಕೊಡಗು ಕರಾಟೆ ತರಬೇತುದಾರ ಸೆನ್ಸಾಯಿ ಕಾವೇರಿ ಹಾಗೂ ಸೆನ್ಸಾಯಿ ಕನ್ನಿಕೆ ಪ್ರಾರ್ಥಿಸಿದರು. ಕೊಡಗು ಕರಾಟೆ ಅಸೋಸಿಯೇಷನ್ ನ ಸಂಯೋಜಕ ಮಾದೇಟಿರ ಪಿ.ತಿಮ್ಮಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಇಂಡೋನೇಷ್ಯಾದ ಜಕಾರ್ಥದಲ್ಲಿ ನಡೆಯುತ್ತಿರುವ ವಲ್ರ್ಡ್ ಶಿಟೋರಿಯೂ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಕರಾಟೆ ಗುರು ಚೆಪ್ಪುಡಿರ ಅರುಣ್ ಮಾಚಯ್ಯ ಅವರು ದೂರವಾಣಿ ಮೂಲಕ ಕರೆ ಮಾಡಿ ಪಂದ್ಯಾವಳಿಗೆ ಶುಭ ಹಾರೈಸಿದರು.








