ಮಡಿಕೇರಿ ಸೆ.25 : ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ವತಿಯಿಂದ ನಾಪೋಕ್ಲು ಕೊಡವ ಸಮಾಜದಲ್ಲಿ ಸಂತೋಷ ಕೂಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ನಾಪೋಕ್ಲು ಎಂದರೆ ನನಗೆ ರೋಮಾಂಚನವಾಗುತ್ತದೆ, ಈ ಸುಂದರವಾದ ಊರು ನಾನು ಓದಿದ ಊರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆೆ ಎಂದು ತಮ್ಮ ಗುರುಗಳನ್ನ ನೆನೆದು ಭಾವುಕರಾದರು.
“ಪೊಮ್ಮಕ್ಕಡ ಬೊಳ್ಚೆಲ್ ಒಡಿಯಂಡ ಮಹತ್ವ” ಎನ್ನುವ ವಿಷಯದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ವಿಚಾರ ಮಂಡನೆ ಮಾಡಿದರು.
ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಡ ಸಿ.ನಾಣಯ್ಯಾ, ನಾಪೋಕ್ಲು ಗ್ರಾ.ಪಂ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಮೆಡಿಕಲ್ ಕಾಲೇಜು ನಿವೃತ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಪರಿಷತಿನ ಖಜಾಂಚಿ ಮೂವೆರ ಧರಣಿ ಗಣಪತಿ, ಉಪಾಧ್ಯಕ್ಷರಾದ ಮಳುವಂಡ ಪೂವಿ ಮುತ್ತಪ್ಪ ಸೇರಿದಂತೆ ಪರಿಷತ್ತಿನ ನಿರ್ದೇಶಕರು ಉಪಸ್ಥಿತರಿದ್ದರು.
ಆಶುಭಾಷಣ ಮತ್ತು ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪರಿಷತ್ ನ ನಿರ್ದೇಶಕಿ, ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಸ್ವಾಗತಿಸಿ, ಕೇಲೇಟಿರ ದಿವ್ಯ ರತ್ನ ಪ್ರಾರ್ಥಿಸಿ, ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ ವಂದಿಸಿದರು.












