ಮಡಿಕೇರಿ ಸೆ.25 : ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗಿದ್ದು, ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಯಾವುದೇ ರೀತಿ ತೊಂದರೆಯಾಗದಂತೆ ದಸರಾ ಆಚರಣೆಗೆ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಸೋಮವಾರ ಪ್ರತ್ಯೇಕವಾಗಿ ಸಭೆ ನಡೆಸಿ ಸಚಿವರು ಮಾತನಾಡಿದರು.
ಅನೇಕ ದಶಕಗಳಿಂದ ಮಡಿಕೇರಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ನಗರ/ಪಟ್ಟಣಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರಸಭೆ ಪೌರಾಯುಕ್ತರಿಗೆ ಹಣ ಬಿಡುಗಡೆ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಾಂಪ್ರದಾಯಿಕ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು ಎಂದು ಸಚಿವರು ಭರವಸೆ ನೀಡಿದರು.
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಂಪ್ರದಾಯದಂತೆ ಯಾವುದೇ ರೀತಿ ವ್ಯತ್ಯಾಸವಾಗದಂತೆ ದಸರಾ ಆಚರಿಸುವತ್ತ ದಸರಾ ಸಮಿತಿಯವರು ಗಮನಹರಿಸಬೇಕು. ದಸರಾ ಸಮಿತಿಯ ಪದಾಧಿಕಾರಿಗಳ ಎಲ್ಲರ ಸಲಹೆಯನ್ನು ಪರಿಗಣಿಸಿ, ಅದರಂತೆ ದಸರಾವನ್ನು ಮುಂದುವರಿಸಿಕೊಂಡು ಹೋಗಬೇಕು. ಸಣ್ಣ ಪುಟ್ಟ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಐತಿಹಾಸಿಕ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಾಂಸ್ಕೃತಿಕ, ಆಚಾರ ವಿಚಾರಗಳನ್ನು ಮುಂದುವರಿಸಿಕೊAಡು ದಸರಾವನ್ನು ಆಚರಿಸಬೇಕು. ಎಲ್ಲರೂ ಕೈಜೋಡಿಸಿದಾಗ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಹಿಂದಿನಂತೆ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಆಚರಿಸಿಕೊಂಡು ಹೋಗುವಂತೆ ಸಚಿವರು ಸಲಹೆ ಮಾಡಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಈ ಹಿಂದೆ ಮಡಿಕೇರಿ ದಸರಾ ಸಮಿತಿಯ ಬೈಲಾ ಪ್ರಕಾರ ಕಾರ್ಯಕ್ರಮ ಆಯೋಜಿಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಶಾಸಕರು ಹೇಳಿದರು.
ನಾಲ್ಕು ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾ ಆರಂಭವಾಗಲಿದ್ದು, ವಿಜಯದಶಮಿಯಂದು ರಾತ್ರಿ ವೇಳೆಯಲ್ಲಿ ದಶಮಂಟಪಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಶಾಸಕರು ವಿವರಿಸಿದರು.
ಈ ಬಾರಿ ಅಕ್ಟೋಬರ್, 15 ರಂದು ಕರಗ ಉತ್ಸವ ಆರಂಭದೊಂದಿಗೆ ದಸರೆಗೆ ಚಾಲನೆಗೊಳ್ಳಲಿದ್ದು, ಅಕ್ಟೋಬರ್, 24 ರವರೆಗೆ ದಸರಾ ನಡೆಯಲಿದೆ. ಒಂದರಿಂದ ಒಂದೂವರೆ ಲಕ್ಷ ಜನರು ಮಡಿಕೇರಿ ದಸರಾಗೆ ಸೇರಲಿದ್ದಾರೆ. ಒಂದೊಂದು ಮಂಟಪವು ರಾಮಾಯಣ/ಮಹಾಭಾರತವನ್ನು ನೆನಪಿಸುತ್ತದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ನುಡಿದರು.
ಈಗಾಗಲೇ ಮಡಿಕೇರಿ ದಸರಾಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರು ಸಹ ಅಕ್ಟೋಬರ್, 21 ರಂದು ಕೊಡಗು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಡಿಕೇರಿ ದಸರಾಗೆ ಕಳೆದ ಬಾರಿ ಒಂದು ಕೋಟಿ ರೂ. ಪ್ರಸ್ತಾವನೆಯಲ್ಲಿ 75 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ 25 ಲಕ್ಷ ರೂ. ಬಿಡುಗಡೆ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೋರಿದರು.
ಮಡಿಕೇರಿ ದಸರಾವನ್ನು ನಗರದಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಡಿಕೇರಿ ನಗರದ ರಸ್ತೆಗಳು ಗುಂಡಿ ಬಿದ್ದಿದ್ದು, ಗುಂಡಿ ಮುಚ್ಚುವ ಕಾರ್ಯವನ್ನು ಆದಷ್ಟು ಶೀಘ್ರ ಆಗಬೇಕು. ಹಾಗೆಯೇ ಬೀದಿ ದೀಪವನ್ನು ಸರಿಪಡಿಸಬೇಕಿದೆ. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕಿದೆ ಎಂದು ಶಾಸಕರು ಸಲಹೆ ಮಾಡಿದರು.
ಮಡಿಕೇರಿ ನಗರಸಭೆ ಅಧ್ಯಕ್ಷರು ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಮಡಿಕೇರಿ ದಸರಾಗೆ 200 ವರ್ಷಗಳ ಇತಿಹಾಸವಿದೆ. ನಾಲ್ಕು ಕರಗ ಉತ್ಸವಗಳೊಂದಿಗೆ ಆರಂಭವಾಗಲಿದ್ದು, ಕ್ರೀಡೆ, ಮಹಿಳಾ, ಯುವ, ಜಾನಪದ, ಮಕ್ಕಳ ಹೀಗೆ 9 ದಿನಗಳ ಕಾಲ ವಿವಿಧ ದಸರಾ ಕಾರ್ಯಕ್ರಮ ನಡೆಯಲಿದೆ ಎಂದರು.
ಕೊಡಗು ಸೇರಿದಂತೆ ರಾಜ್ಯದ ಕಲಾಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ವೇದಿಕೆಯನ್ನು ಟೆಂಡರ್ ಮೂಲಕ ಆಹ್ವಾನಿಸಲಾಗಿದೆ. ವೇದಿಕೆಗೆ ಹಣ ಬಿಡುಗಡೆ ಮಾಡಬೇಕಿದೆ. ಜೊತೆಗೆ ಗಾಂಧಿ ಮೈದಾನದಲ್ಲಿ ಶಾಶ್ವತ ವೇದಿಕೆ ನಿರ್ಮಿಸುವುದು ಒಳ್ಳೆಯದು ಎಂದು ಅನಿತಾ ಪೂವಯ್ಯ ಅವರು ಹೇಳಿದರು.
ಈ ವರ್ಷ ಮಡಿಕೇರಿ ದಸರಾಗೆ 2 ಕೋಟಿ ಅನುದಾನ ನೀಡಬೇಕು. ಸರ್ಕಾರದಿಂದ ಎಷ್ಟು ಹಣ ಬರುತ್ತದೆ. ಅದರಂತೆ ಕಾರ್ಯಕ್ರಮ ಆಯೋಜಿಸಲಾಗುವುದು. ವಿಜೃಂಭಣೆ ಅಲ್ಲದಿದ್ದರೂ ಸಾಂಪ್ರದಾಯಿಕವಾಗಿ ದಸರಾ ಮುಂದುವರಿಸಿಕೊAಡು ಹೋಗಬೇಕಿದೆ ಎಂದು ಅನಿತಾ ಪೂವಯ್ಯ ಅವರು ಕೋರಿದರು.
ದಸರಾ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಪ್ರವಾಸಿಗರು ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತೀ ಮುಖ್ಯ ಎಂದು ಅವರು ಮನವಿ ಮಾಡಿದರು.
ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಅವರು ಮಾತನಾಡಿ ರಾತ್ರಿ ವೇಳೆ 10 ಗಂಟೆ ನಂತರ ಡಿ.ಜೆ. ಸ್ಥಗಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಇದನ್ನು ಸರಳೀಕರಣ ಮಾಡಬೇಕು. ಕಳೆದ ಬಾರಿಯ 25 ಲಕ್ಷ ರೂ. ಬಿಡುಗಡೆ ಮಾಡಬೇಕು. ಈ ಬಾರಿಯ ಮಡಿಕೇರಿ ದಸರಾಗೆ ಖಚಿತವಾಗಿ ಬಜೆಟ್‌ನಲ್ಲಿ ಇಂತಿಷ್ಟು ಹಣ ಎಂದು ಪ್ರಕಟಿಸಬೇಕು. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಿಡುಗಡೆಯಾಗುವ ಹಣವನ್ನು ನೇರವಾಗಿ ನಗರಸಭೆ ಆಯುಕ್ತರಿಗೆ ಬಿಡುಗಡೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಮಡಿಕೇರಿ ದಸರಾ ಸಮಿತಿ ಖಜಾಂಜಿ ಅರುಣ್ ಶೆಟ್ಟಿ ಅವರು ಮಾತನಾಡಿ ಮಡಿಕೇರಿ ನಗರದ ಹಳೇ ವಿದ್ಯುತ್ ಕಂಬಗಳನ್ನು ಬದಲಿಸಬೇಕು. ವಿದ್ಯುತ್ ಮಾರ್ಗಗಳನ್ನು ಸರಿಪಡಿಸಬೇಕು ಎಂದು ಕೋರಿದರು.
ಮಡಿಕೇರಿ ದಸರಾ ಸಮಿತಿ ಗೌರವ ಅಧ್ಯಕ್ಷರಾದ ಮಹೇಶ್ ಜೈನಿ ಅವರು ಮಾತನಾಡಿ 2018 ರ ನಂತರ ಪ್ರಾಕೃತಿಕ ವಿಕೋಪದಿಂದಾಗಿ ಸರಳವಾಗಿ ದಸರಾ ಆಚರಿಸಿಕೊಂಡು ಬರಲಾಗಿದೆ. ಈ ಬಾರಿಯಾದರೂ ದಸರಾ ಆರಂಭಕ್ಕೂ ಮೊದಲೇ ಹಣ ಬಿಡುಗಡೆ ಮಾಡಬೇಕು ಎಂದು ಕೋರಿದರು.
ವೇದಿಕೆ ಬಳಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಸುಗಮಮಾಗಿ ದಶಮಂಟಪ ಚಲಿಸಲು ಅವಕಾಶ ಮಾಡಬೇಕು ಎಂದರು.
ನಗರ ದಸರಾ ಸಮಿತಿ ಉಪಾಧ್ಯಕ್ಷರು ಮಾತನಾಡಿ 9 ದಿನಗಳ ಕಾಲ ದಸರಾ ಆಚರಿಸಲಾಗುತ್ತಿದ್ದು, 11-12 ದಿನಗಳಿಗಾದರೂ ನಗರ ಅಲಂಕಾರ ಮಾಡಬೇಕು ಎಂದು ಸಲಹೆ ಮಾಡಿದರು.
ಉತ್ತಮ ರೀತಿಯಲ್ಲಿ ದಸರಾ ಆಚರಣೆಗೆ ಅವಕಾಶ ಮಾಡಬೇಕು. ಬರದ ಛಾಯೆ ಹೋಗುವಂತಾಗಲು ಮಡಿಕೇರಿ ದಸರಾ ಆಚರಿಸಿದರೆ ಉತ್ತಮ ಮಳೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ದಶಮಂಟಪ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಅವರು ಮಾತನಾಡಿ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಹಿನ್ನೆಲೆ ಹೊಂದಿರುವ ಮಡಿಕೇರಿ ದಸರಾವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಮಡಿಕೇರಿ ನಗರದ ರಸ್ತೆ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಮಳೆ ಇಲ್ಲದಿದ್ದಲ್ಲಿ ಡಾಂಬರು ರಸ್ತೆ ನಿರ್ಮಾಣ ಮಾಡಲಾಗುವುದು. ಮಳೆ ಇದ್ದಲ್ಲಿ ಗುಂಡಿ ಮುಚ್ಚಲಾಗುವುದು ಎಂದು ಹೇಳಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಅವರು ಮಾತನಾಡಿ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ದಸರಾ ಒಳಗೆ ಪುನರ್ ಸ್ಥಾಪಿಸಬೇಕು. ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಕ್ಟೋಬರ್, 17 ರಂದು ತಲಕಾವೇರಿ ಜಾತ್ರೆ ನಡೆಯಲಿದ್ದು, ಆ ದಿನದಂದು ಯುವ ದಸರಾ ಆಯೋಜಿಸಬಾರದು ಎಂದು ಸಲಹೆ ಮಾಡಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಅವರು ಮಾತನಾಡಿ ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಒದಗಿಸಬೇಕು. ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ 19 ಸಂದರ್ಭದಲ್ಲಿ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಗಿದ್ದು, ಈ ಬಾರಿಯಾದರೂ ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತಾಗಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸರ್ಕಾರದ ನಿರ್ದೇಶನದಂತೆ ಆಚರಿಸಲಾಗುವುದು ಎಂದರು.
ರಾತ್ರಿ ವೇಳೆ ಕರ್ಕಶ ಶಬ್ಧ (ಪೀಪೀ) ನಿಷೇಧ ಮಾಡಬೇಕು ಎಂದು ದಸರಾ ಸಮಿತಿಯೊಬ್ಬರು ಸಲಹೆ ಮಾಡಿದರು. ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ದಸರಾ ಸಮಿತಿ ಪದಾಧಿಕಾರಿಗಳು ಇತರರು ಇದ್ದರು.
ಗೋಣಿಕೊಪ್ಪ ದಸರಾ ಆಚರಣೆ: ಶಾಸಕರಾದ ಪೊನ್ನಣ್ಣ ಅವರು ಮಾತನಾಡಿ ಕಳೆದ ಬಾರಿಯಂತೆ ದಸರಾವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ವ್ಯಾಪ್ತಿಯ ರಸ್ತೆಗಳನ್ನು ಸರಿಪಡಿಸಬೇಕು ಎಂದರು.
ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ ಅವರು ಮಾತನಾಡಿ ಹಲವು ವರ್ಷಗಳಿಂದ ಗೋಣಿಕೊಪ್ಪ ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು. ಗೋಣಿಕೊಪ್ಪ ದಸರಾಗೆ 25 ಸಾವಿರ ಜನರು ವಿಜಯದಶಮಿಯಂದು ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ದಸರಾ ಆಚರಣೆ ಕೊಡಗು ಜಿಲ್ಲೆಯ ಸಂಪ್ರದಾಯವನ್ನು ಹೊಂದಿರಬೇಕು. ಅದು ಬಿಟ್ಟು ತಮಿಳುನಾಡುವಿನಿಂದ ಡಿಜೆಯನ್ನು ತರಿಸಿ ಆಚರಿಸುವುದು ಸರಿಯೇ ಎಂಬ ಬಗ್ಗೆ ಯೋಚಿಸಬೇಕಿದೆ. ಕೊಡಗಿನ ಸಾಂಪ್ರದಾಯಿಕ, ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಶಾಸಕರಾದ ಪೊನ್ನಣ್ಣ ಅವರು ಸ್ಥಳೀಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆದಿವಾಸಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕು ಎಂದರು.









