ಮಡಿಕೇರಿ ಸೆ.25 : ಇದೇ ಅಕ್ಟೋಬರ್, 17 ರಂದು ಮಧ್ಯರಾತ್ರಿ (1.27 ಗಂಟೆಗೆ) ಕಾವೇರಿ ತುಲಾಸಂಕ್ರಮಣ ತೀರ್ಥೋದ್ಭವ ಸಂಭವಿಸಲಿದ್ದು, ಕಳೆದ ಬಾರಿಯಂತೆ ಕಾವೇರಿ ತುಲಾ ಸಂಕ್ರಮಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಶಾಸಕರ ನೇತೃತ್ವದಲ್ಲಿ ಭಾಗಮಂಡಲದಲ್ಲಿ ಮತ್ತೊಂದು ಪೂರ್ವಭಾವಿ ಸಭೆ ನಡೆಯಲಿದೆ. ತಲಕಾವೇರಿ ಜಾತ್ರೆ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದರು.
ತಲಕಾವೇರಿಗೆ ತೆರಳುವ ಭಕ್ತಾಧಿಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವುದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ರಸ್ತೆ ಬದಿ ಗಿಡಗಳನ್ನು ಕಡಿಯುವುದು, ಕುಡಿಯುವ ನೀರು ಕಲ್ಪಿಸುವುದು, ಶೌಚಾಲಯ ವ್ಯವಸ್ಥೆ ಮಾಡುವುದು, ಶುಚಿತ್ವಕ್ಕೆ ಒತ್ತು ನೀಡುವುದು, ಆರೋಗ್ಯ ಸೇವೆ ಕಲ್ಪಿಸುವುದು ಹೀಗೆ ಹಲವು ಕಾರ್ಯಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ನಿರ್ದೇಶನ ನೀಡಿದರು.
ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು. ರಸ್ತೆ ಬದಿ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ಸಮರೋಪಾದಿಯಲ್ಲಿ ವಿವಿಧ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್ ನಿಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು. ರಾತ್ರಿ ವೇಳೆ ತೀರ್ಥೋದ್ಭವ ಸಂಭವಿಸುವುದರಿಂದ ಭಾಗಮಂಡಲದಿಂದ ತಲಕಾವೇರಿವರೆಗೆ ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಲ್ಲರ ಸಲಹೆ ಸಹಕಾರ ಪಡೆದು ಕರ್ತವ್ಯ ನಿರ್ವಹಿಸಬೇಕು. ಈ ಹಿಂದೆ ನಡೆಸಿಕೊಂಡು ಬಂದಿರುವಂತೆ ಮುಂದೆಯೂ ಸಹ ಪಾಲಿಸಬೇಕು ಎಂದು ಅವರು ಹೇಳಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂಬಂಧಿಸಿದಂತೆ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಬೇಕು. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದರು.
ಹಿಂದಿನಂತೆ ತಲಕಾವೇರಿ ಜಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಭಾಗಮಂಡಲದಿಂದ ತಲಕಾವೇರಿ ವರೆಗೆ ಭಕ್ತಾಧಿಗಳು ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಅಗತ್ಯ ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಎರಡು ಪಾಳಿಯಲ್ಲಿ ಬಂದೋ ಬಸ್ತ್ ಮಾಡಲಾಗುತ್ತದೆ. ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ದಸರಾ ಸಂದರ್ಭದಲ್ಲಿ ವಾಹನಗಳ ಓಡಾಟ ಹೆಚ್ಚು ಇರುತ್ತದೆ. ಆದ್ದರಿಂದ ರಸ್ತೆ ಬದಿ ಗಿಡಗಂಟೆಯನ್ನು ಕಡಿಯಬೇಕು ಎಂದರು.
ತಲಕಾವೇರಿ ದೇವಾಲಯ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ತೀರ್ಥಕುಂಡಿಕೆ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿದೆ ಎಂದರು.
ಪ್ರಮುಖರಾದ ಎಂ.ಬಿ.ದೇವಯ್ಯ ಅವರು ಮಾತನಾಡಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಕೊಡವ ಸಂಪ್ರದಾಯದಂತೆ ದುಡಿ ತೆಗೆದುಕೊಂಡು ಹೋಗುವವರಿಗೆ ಪ್ರವೇಶಕ್ಕೆ ಅವಕಾಶ ಮಾಡಬೇಕು ಎಂದರು.
ಕರಿಕೆ ಭಾಗದ ಪ್ರಮುಖರೊಬ್ಬರು ಮಾತನಾಡಿ ಭಾಗಮಂಡಲ-ಕರಿಕೆ ರಸ್ತೆ ಸರಿಪಡಿಸಬೇಕು ಎಂದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಾಡು ಕಡಿಯುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.
ಬಿ.ಎಸ್.ತಮ್ಮಯ್ಯ ಅವರು ಮಾತನಾಡಿ ತುಲಾ ಸಂಕ್ರಮಣ ಜಾತ್ರೆಗೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಮಾತನಾಡಿ ಅನ್ನದಾನ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗದಂತೆ ಗಮನಹರಿಸಬೇಕು. ಈ ಬಾರಿ ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಎಲ್ಲರ ಸಲಹೆ, ಮಾರ್ಗದರ್ಶನ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು. ಶಾಸಕರ ನೇತೃತ್ವದಲ್ಲಿ ಮತ್ತೊಂದು ಸಭೆ ಮಾಡಲಾಗುವುದು ಎಂದು ಹೇಳಿದರು. ಸುನಿಲ್ ಪತ್ರಾವೋ ಅವರು ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.










