ಕುಶಾಲನಗರ ಸೆ.26 : ಕುಶಾಲನಗರದ ಕೊಡಗು ಹೆಗ್ಗಡೆ ಸಮಾಜ ವಾರ್ಷಿಕ ಮಹಾಸಭೆಯು ಹಾರಂಗಿಯ ಸಮಾಜದ ನಿವೇಶನದಲ್ಲಿ ಸಭೆ ನಡೆಯಿತು.
ಸಮಾಜದ ಅಧ್ಯಕ್ಷ ಚಂಗಚಂಡ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಮಹಾಸಭೆಯೊಳಗೆ ಅರ್ಧ ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಾಗ ಖರೀದಿಸಿ ಮುಂಬರುವ ವರ್ಷಗಳಲ್ಲಿ ಸುಸಜ್ಜಿತ ಕಟ್ಟಡವನ್ನು ಸರ್ಕಾರ ಮತ್ತು ದಾನಿಗಳ ನೆರವಿನಿಂದ ನಿರ್ಮಾಣ ಮಾಡಲು ನಿರ್ಧರಿಸಲಾಯಿತು.
ನಂತರ ಕೈಲ್ ಪೋಳ್ದ್ ಒತ್ತೊರ್ಮೆ ಕೂಟ ನಡೆಯಿತು. ಈ ಸಂದರ್ಭ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಡಿಞರಂಡ ಪ್ರಭು ಕುಮಾರ್, ಕೊಡಗಿನಲ್ಲಿ ಹನ್ನೆರಡನೇ ಶತಮಾನಕ್ಕೂ ಮೊದಲು ಕೊಡಗು ಹೆಗ್ಗಡೆ ಜನಾಂಗದವರು ಕೊಡಗಿಗೆ ಬಂದು ನೆಲೆಸಿದವರಾಗಿದ್ದಾರೆಂದು ಹೊಯ್ಸಳರ ಕಾಲದಲ್ಲಿ ಕೊಡಗಿನ ರಾಜರ ಜೊತೆ ಯುದ್ಧಕ್ಕಾಗಿ ಬಂದು ವೀರರು ಯುದ್ದದಲ್ಲಿ ಸೋತು ಮತ್ತೆ ಊರಿಗೆ ಮರಳದೆ ಇಲ್ಲೇ ನೆಲೆ ನಿಂತು ಲಿಂಗಾಯತ ರಾಜರ ಆಳ್ವಿಕೆಯಲ್ಲಿ ಸೈನ್ಯಕ್ಕೆ ಸೇರಿದವರು ಕೆಲವರಾದರೆ, ಕೆಲವರು ಕೃಷಿಕರಾದರೆಂದು ನಂಬಲಾಗಿದೆ.
ಹಾಲೇರಿ ಅರಸರ ಕಾಲದಲ್ಲಿ ಜಮ್ಮ ಜಾಹಗೀರು ಕೊಡಲ್ಪಟ್ಟಿತು. ಅಲ್ಲದೆ ಅರಸರ ಕಾಲದಲ್ಲಿ ಗ್ರಾಮಗಳಲ್ಲಿ ನಡೆಯುವ ದೇವರ ಉತ್ಸವಗಳಲ್ಲಿ ದೇವರ ಕಾರ್ಯ ಮಾಡುವಲ್ಲಿ ಮುಂದಾಳ್ವತ್ವ ವಹಿಸುತ್ತಿದ್ದರು ಮತ್ತು ಅರಸರ ಆಳ್ವಿಕೆಗೆಯಲ್ಲಿ ಕಂದಾಯ ಸಂಗ್ರಹ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡವರಾಗಿದ್ದರೆಂದು ಇತಿಹಾಸಕಾರರು ಮತ್ತು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕೈಲ್ ಪೋಳ್ದ್ ಹಬ್ಬವನ್ನ ತಲಾ ತಲಾಂತರದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಪದವಿಯಲ್ಲಿ ರಾಂಕ್ ಪಡೆದ ಮಂಡೆಯಂಡ ರನ್ನಿಕಾ, ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಕೊಂಗೆಪಂಡ ನಂಜಪ್ಪ, ಬೆಂಗಳೂರು ಬೆಮೆಲ್ ನಿವೃತ್ತ ಉದ್ಯೋಗಿ ಮೇಲಾಟಂಡ ಚಂಗಪ್ಪ, ಅಂಗನವಾಡಿ ಶಿಕ್ಷಕಿ ಪುದಿಯತಂಡ ಗಂಗಮ್ಮ ಅವರನ್ನು ಸನ್ಮಾನಿ ಗೌರವಿಸಲಾಯಿತು.
ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಪಂದಿಕಂಡ ಕುಶ, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷರಾದ ಚಳಿಯಂಡ ಕಮಲ, ಪ್ರಮುಖರಾದ ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟೀರ ರಾಧಾ ಕುಟ್ಟಪ್ಪ, ಕುಶಾಲನಗರ ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಚಂಗಚಂಡ ಸುಬ್ರಮಣಿ, ಕಾರ್ಯದರ್ಶಿ ಗಳಾದ ಪಂದಿಕಂಡ ವಿಠಲ, ಸಹ ಕಾರ್ಯದರ್ಶಿ ಚಳಿಯಂಡ ಯಶ್ವಂತ್, ಖಜಾಂಚಿ ಪಂದಿಕಂಡ ಗಣೇಶ್, ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೋಣಪ್ಪ ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತಾ, ಸಲಹೆಗಾರ ಕೊಂಗೆಪಂಡ ನಂಜಪ್ಪ, ಚಳಿಯಂಡ ಅಚ್ಚಯ್ಯ ಹಾಜರಿದ್ದರು.










