ಕುಶಾಲನಗರ ಸೆ.26 : ವಚನಕಾರರ ವ್ಯಕ್ತಿತ್ವ, ಸಾಧನೆ ಹಾಗೂ ಅವರು ಎತ್ತಿ ಹಿಡಿದ ಜೀವನ ಮೌಲ್ಯಗಳ ಘನತೆ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕಿದೆ ಎಂದು ಕುಶಾಲನಗರ ತಾಲ್ಲೂಕು ತಹಶೀಲ್ದಾರರು ಹಾಗೂ ದಂಡಾಧಿಕಾರಿ ಕಿರಣ್ ಗೌರಯ್ಯ ಹೇಳಿದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಿಂತನಾ ಸಭಾಂಗಣದಲ್ಲಿ ಕಾಲೇಜಿನ ಆಂತರಿಕ ಗುಣ ಮಟ್ಟ ಭರವಸಾ ಕೋಶ, ಕನ್ನಡ ವಿಭಾಗ ಹಾಗೂ ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ” ವಿದ್ಯಾರ್ಥಿಗಳೆಡೆಗೆ ವಚನ ಸಾಹಿತ್ಯದ ನಡಿಗೆ ” ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ದಾಸ್ಯ ಸಂಕೋಲೆಯಲ್ಲಿದ್ದ ಜನಸಾಮಾನ್ಯರ ಬದುಕಿಗೆ ಬೆಳಕು ನೀಡಿದ ವಚನಕಾರರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅರಿಯಬೇಕಿದೆ.
ಆ ಮೂಲಕ ಸಮಸಮಾಜವನ್ನು ಕಟ್ಟಲು ಕಂಕಣಬದ್ಧರಾಗಬೇಕೆಂದು ಕರೆಕೊಟ್ಟರು.
ವಿಶೇಷ ಉಪನ್ಯಾಸ ನೀಡಿದ ಕೊಡಗು ವಿಶ್ವ ವಿದ್ಯಾಲಯದ ಉಪನ್ಯಾಸಕ ಡಾ.ಜಮೀರ್ ಅಹಮದ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೆ ಘೋಷಿಸಿದ ಮಹಿಳೆಯರ ಮೀಸಲಾತಿಯ ಪ್ರಸ್ತಾಪ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರ ಪರಿಕಲ್ಪನೆಯಾಗಿದೆ. ನಡೆ ನುಡಿಗಳಲ್ಲಿ ಒಂದಾಗಿದ್ದ ವಚನಕಾರರ ಸಂದೇಶಗಳ ಪಾಲನೆ ಇಂದು ತುರ್ತು ಅಗತ್ಯವಿದೆ ಎಂದರು.
ಹಾಗಾಗಿ ಸಂವಿಧಾನದ ಪೀಠಿಕೆಯ ಮಾದರಿಯಲ್ಲಿ ವಚನಗಳನ್ನು ಪಠಿಸುವ ಮತ್ತು ಅವುಗಳ ವ್ಯಾಖ್ಯಾನವನ್ನು ಅರಿಯುವ ಕೆಲಸ ಪ್ರತಿ ದಿನವೂ ಶಾಲಾ ಕಾಲೇಜುಗಳಲ್ಲಿ ನಡೆದಿದ್ದೇ ಆದಲ್ಲಿ ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ಭವಿಷ್ಯದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಹಲವು ವಚನಗಳ ವ್ಯಾಖ್ಯಾನಗಳ ಮೂಲಕ ಜಮೀರ್ ಅಹಮದ್ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಧಾವಿಸಿದ್ದ ಕುಶಾಲನಗರ ಠಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ, 800 ವರ್ಷಗಳ ಹಿಂದೆ ವಚನಕಾರರು ಸಾರಿದ ಸಂದೇಶಗಳ ಪಾಲನೆಯಲ್ಲಿ ನಮ್ಮಗಳ ವ್ಯಕ್ಯಿತ್ವ ಅಡಗಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ವಚನಕಾರರ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನ ಸೊಗಸಾಗಲಿದೆ.
ಇಂದು ಸಮಾಜದ ಘಟಿಸುತ್ತಿರುವ ಎಲ್ಲಾ ತಲ್ಲಣಗಳಿಗೆ ಮೊಬೈಲ್ ಬಳಕೆಯೇ ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಗಳಲ್ಲಿ ಒಳ್ಳೆಯ ಮಾಹಿತಿಗಳನ್ನು ಮಾತ್ರ ನೋಡಬೇಕು ಎಂದು ಕರೆಕೊಟ್ಟರು.
ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಕಾಲೇಜು ಪ್ರಾಂಶುಪಾಲ ಪ್ರವೀಣ ಕುಮಾರ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸುನಿಲ್ ಕುಮಾರ್, ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶ ವಿಭಾಗದ ಮುಖ್ಯಸ್ಥೆ ಡಾ.ಎಂ.ರಶ್ಮಿ, ರಾಜ್ಯಶಾಸ್ತ್ರ ವಿಭಾಗದ ಡಾ.ಕುಸುಮಾ ಇದ್ದರು.
ವಿದ್ಯಾರ್ಥಿನಿ ಹೇಮಾವತಿ ಸ್ವಾಗತಿಸಿ, ಶಾಹಿದಾ ವಂದಿಸಿದರು. ಉಪನ್ಯಾಸಕ ಸುನಿಲ್ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ವಚನಗಾಯನ ನಡೆಯಿತು.








