ಮಡಿಕೇರಿ ಸೆ.26 : ಕೊಡಗಿನ ಮೂಲಭೂತ ಸಮಸ್ಯೆಗಳ ಕುರಿತು ತಮ್ಮ ಎರಡು ಅವಧಿಯಲ್ಲಿ ಕನಿಷ್ಠ ಕಾಳಜಿ ತೋರದ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಅವರು, ಅತ್ಯಂತ ನಿಷ್ಕ್ರೀಯ ಸಂಸದರು ಎಂದು ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭಗಳಲ್ಲಷ್ಟೆ ಪ್ರತ್ಯಕ್ಷರಾಗುವ ಪ್ರತಾಪ ಸಿಂಹ, ಭಾವನಾತ್ಮಕ ಮತ್ತು ಧರ್ಮಾಧಾರಿತ ವಿಚಾರಗಳೊಂದಿಗೆ ಮೋದಿ ಹೆಸರನ್ನು ಹೇಳಿ ಮತಯಾಚಿಸುತ್ತಾರೆಯೇ ಹೊರತು ಅಭಿವೃದ್ಧಿಪರ ಚಿಂತನೆ ಹೊಂದಿಲ್ಲ ಎಂದು ಆರೋಪಿಸಿದರು.
ಮುಂದಿನ ಲೋಕಸಭಾ ಚುಣಾವಣೆಯಲ್ಲಿ ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಅವರು ಸೋಲುವುದು ಖಚಿತವೆಂದು ಭವಿಷ್ಯ ನುಡಿದರು.
ಕಳೆದ ಒಂಭತ್ತೂವರೆ ವರ್ಷಗಳಲ್ಲಿ ಬೆಳೆಗಾರರ ಹಾಗೂ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಸಂಸತ್‍ನಲ್ಲಿ ಪ್ರಬಲವಾಗಿ ಮಂಡಿಸಿ, ಕೇಂದ್ರದ ಗಮನ ಸೆಳೆಯುವಲ್ಲಿ ಪ್ರತಾಪ್ ಸಿಂಹ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸಂಸದರಾಗಿ ಆಯ್ಕೆಯಾದ ಎರಡು ಬಾರಿಯೂ ಕೇಂದ್ರದಲ್ಲಿ ಅವರದ್ದೇ ಪಕ್ಷ ಅಧಿಕಾರದಲ್ಲಿದ್ದರೂ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ಅವರು ಸೋತಿದ್ದಾರೆ. ಇವರ ಈ ಎಲ್ಲಾ ವೈಫಲ್ಯಗಳ ಬಗ್ಗೆ ಜನರಿಗೆ ಅರಿವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಕೃಷಿಯ ಸಮಸ್ಯೆಗಳಿಗೆ ಸಂಸದರು ಸ್ಪಂದಿಸುವ ಅಗತ್ಯವಿತ್ತು. ಕಾಫಿ ಕೃಷಿ ಸಂಕಷ್ಟಕ್ಕೆ ಸಿಲುಕಿದಾಗ ಅದು ಕೇವಲ ಬೆಳೆಗಾರನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ, ಅದನ್ನು ಅವಲಂಬಿಸಿದ ಕಾರ್ಮಿಕರು, ವರ್ತಕರು ಸೇರಿದಂತೆ ಎಲ್ಲರು ಸಂಕಷ್ಟಕ್ಕೆ ಸಿಲುಕುತ್ತಾರೆ. 2014 ರ ಲೋಕಸಭಾ ಚುನಾವಣೆ ಹಂತದಲ್ಲಿ ಪ್ರತಾಪ ಸಿಂಹ ಅವರು ತಮ್ಮ ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಾಲಮನ್ನಾ ಮಾಡುವುದಾಗಿ, ಕೇಂದ್ರ ವಾಣಿಜ್ಯ ಮಂತ್ರಾಲಯದೊಂದಿಗೆ ಚರ್ಚಿಸಿ, ಕಾಫಿ ಬೆಳೆಗಾರರ ಸಂಕಷ್ಟಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಅವುಗಳನ್ನು ಕಾರ್ಯಗತಗೊಳಿಸಿಲ್ಲ ಎಂದು ಸಂಕೇತ್ ಪೂವಯ್ಯ ಟೀಕಿಸಿದರು.
ಬೆಳೆಗಾರರು ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ಪ್ರತಾಪ್ ಸಿಂಹ ಸೋತಿದ್ದಾರೆ. ಕೇವಲ ನಾಲ್ಕೈದು ಲಕ್ಷ ಸಾಲಕ್ಕಾಗಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗುತ್ತಿರುವ ಸಂದರ್ಭ, ಕನಿಷ್ಟ ಒಂದು ಸಭೆ ಕರೆದು, ಬೆಳೆಗಾರರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯುವ ಕನಿಷ್ಠ ಪ್ರಯತ್ನ ಸಂಸದರಿಂದ ನಡೆದಿಲ್ಲ. ಮಾನವ-ಪ್ರಾಣಿ ಸಂಘರ್ಷ ವಿಕೋಪಕ್ಕೆ ತೆರಳುತ್ತಿದ್ದು, ಹಲವು ಜೀವಹಾನಿಗಳು ಸಂಭವಿಸಿದ್ದರು, ಸಂತ್ರಸ್ತರನ್ನು ಭೇಟಿಯಾಗುವ ಪ್ರಯತ್ನ ಸಂಸದರಿಂದ ನಡೆದಿಲ್ಲ. ಈ ಎಲ್ಲಾ ವೈಫಲ್ಯಗಳ ನಡುವೆ ಪ್ರತಾಪ ಸಿಂಹ ಅವರು ಗಾಯದ ಮೇಲೆ ಬರೆ ಎಳೆಯುವಂತೆ ಸುಳ್ಳುಗಳನ್ನಷ್ಟೆ ಹೇಳಿಕೊಂಡು ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜಿಲ್ಲೆಗೆ ರೈಲ್ವೆ ಸಂಪರ್ಕ, ದಶಪಥ ರಸ್ತೆ ಒದಗಿಸುವ ಮತ್ತು ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸುವ ಸಂಸದ ಪ್ರತಾಪ ಸಿಂಹ ಅವರ ಭರವಸೆಗಳು ಹುಸಿಯಾಗಿದೆ. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅವರು ಕೊಡಗಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬಿಜೆಪಿ ರಾಜ್ಯ ಸರ್ಕಾರವಿದ್ದಾಗ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ 10 ಕೋಟಿ ರೂ. ಅನುದಾನ ಒದಗಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಕನಿಷ್ಟ ಅವರ ಸರ್ಕಾರ ಅಧಿಕಾರದಲ್ಲಿದ್ದ ಹಂತದಲ್ಲಿ ಎರಡು ವರ್ಷಗಳ ಹಿಂದೆಯೇ ನಿಗಮ ಸ್ಥಾಪಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಬಹುದಿತ್ತು. ಬದಲಾಗಿ ಚುನಾವಣಾ ಹಂತದಲ್ಲಿ ನಿಗಮವನ್ನು ಘೋಷಿಸಿದರು. ಆದರೆ ಅದಕ್ಕೆ ಚೈತನ್ಯ ನೀಡುವ ಕೆಲಸ ಆಗಿಲ್ಲ ಎಂದು ಸಂಕೇತ್ ಪೂವಯ್ಯ ಆರೋಪಿಸಿದರು.









