ಮಡಿಕೇರಿ ಸೆ.26 : ಕರ್ನಾಟಕ ರಾಜ್ಯ ಎಸ್‍ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಸೆ.28 ರಂದು ಕುಶಾಲನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ಜಯಂತೋತ್ಸವವನ್ನು ಆಚರಿಸಲಾಗುವುದೆಂದು ಸಮಿತಿಯ ಅಧ್ಯಕ್ಷ ಎಂ.ಎಸ್.ಮಹೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದ ಎಪಿಸಿಎಂ ಸಭಾಂಗಣದ ಜೈ ಭೀಮ್ ಸ್ಮರಣ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ.
ಕೊಡಗು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹಾಗೂ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪುಷ್ಪಾರ್ಚನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಶ್ರಿ ಬಂತೇಜಿ ಬೋಧಿದತ್ತತೇರಾ ದಿವ್ಯ ಸಾನಿಧ್ಯ ವಹಿಸಲಿದ್ದು, ಪ್ರಧಾನ ಭಾಷಣಕಾರರಾಗಿ ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ್ ಪಾಲ್ಗೊಳ್ಳಲಿದ್ದಾರೆ. ಸಭಾ ಗೌರವಾಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಎಸ್‍ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದ ಅವರು, ಕೊಡಗು ಜಿಲ್ಲೆಯ ಎಲ್ಲಾ ಇಲಾಖೆಯ ನೌಕರರು ಒಳಗೊಂಡಂತೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್‍ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯು ವಿವಿಧ ಚಟುವಟಿಕೆ ಮತ್ತು ಸರ್ಕಾರಿ ನೌಕರರ ಹಾಗೂ ಸಮುದಾಯದ ಹಿತವನ್ನು ಸಮಾನತೆಯ ಒಳಿತನ್ನು ಕಾಪಡುವ ದೃಷ್ಟಿಯಿಂದ ನೂತನ ಸಮಿತಿಯನ್ನು ರಚಿಸಿದ್ದು, 2022 ಆಗಸ್ಟ್ 28 ರಂದು ಕೊಡಗು ಘಟಕ ಆರಂಭಗೊಂಡಿದೆ. ಕಳೆದ ಒಂದು ವರ್ಷಗಳಿಂದ ಸಮಿತಿಯು ನೌಕರರುಗಳನ್ನು ಸಂಘಟಿಸುತ್ತಾ ಜಿಲ್ಲಾ ಮತ್ತು ತಾಲೂಕು ಸಮಿತಿಗಳನ್ನು ರಚಿಸಿ ವಿವಿಧ ಇಲಾಖೆಗಳಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಈಗಾಗಲೇ ಜಿಲ್ಲೆಯಲ್ಲಿ 560ಕ್ಕೂ ಹೆಚ್ಚು ಸದಸ್ಯರನ್ನು ಗುರುತಿಸಲಾಗಿದ್ದು, ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಪೊನ್ನಂಪೇಟೆ ತಾಲೂಕು ಘಟಕವನ್ನು ರಚಿಸಿ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಎಂ.ಎಸ್.ಮಹೇಂದ್ರ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಎಲ್.ಶಂಭು, ಕುಶಾಲನಗರ ತಾಲೂಕು ಅಧ್ಯಕ್ಷ ಅಧ್ಯಕ್ಷ ಆರ್.ವಿಜಯಾನಂದ ಉಪಸ್ಥಿತರಿದ್ದರು.










