ಮಡಿಕೇರಿ ಸೆ.27 : ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ವಾಣಿಜ್ಯ ಭೂಪರಿವರ್ತನೆ ಮತ್ತು ನಗರೀಕರಣ ಮಾರಕವಾಗಿದ್ದು, ನಿಯಮ ಬಾಹಿರ ಭೂಪರಿವರ್ತನೆಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಆದ್ದರಿಂದ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಪ್ರಮುಖ ಹಾಗೂ ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕಲಹದಲ್ಲಿ ತೊಡಗಿವೆ. ಆದರೆ ಕಾವೇರಿ ನದಿ ಹುಟ್ಟುವ ಕೊಡಗಿನ ಸ್ಥಿತಿಗತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಹಾಲಿಗಾಗಿ ಕಿತ್ತಾಟ ನಡೆಯುತ್ತಿದೆ, ಆದರೆ ಹಾಲು ಕೊಡುವ ಹಸುವಿಗೆ ಏನಾಗಿದೆ ಎಂದು ಯಾರೂ ಚಿಂತಿಸುತ್ತಿಲ್ಲ. ವಾಣಿಜ್ಯ ಭೂಪರಿವರ್ತನೆ ಮತ್ತು ನಗರೀಕರಣದಿಂದ ಕಾವೇರಿ ಜಲಮೂಲಕ್ಕೆ ಅಪಾಯ ಎದುರಾಗಿದೆ. ತೋಟ, ಗದ್ದೆಗಳು ನಿಯಮ ಬಾಹಿರವಾಗಿ ಭೂಪರಿವರ್ತನೆಯಾಗುತ್ತಿವೆ. ಹೊರಗಿನವರು ಬಂದು ರೆಸಾರ್ಟ್, ಲೇಔಟ್ ಗಳನ್ನು ಮಾಡಿ ನಗರೀಕರಣಗೊಳಿಸುತ್ತಿದ್ದಾರೆ. ಜಿಲ್ಲೆಯ ಮೂಲನಿವಾಸಿಗಳು ಮೂಲೆ ನಿವಾಸಿಗಳಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕೊಡಗು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಪರಿಸರ ಮತ್ತು ಜಲಮೂಲಗಳನ್ನು ಉಳಿಸಿಕೊಳ್ಳಲು ನಾವು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ. ಆದರೆ ಭ್ರಷ್ಟ ವ್ಯವಸ್ಥೆ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಭೂಪರಿವರ್ತನೆಯಲ್ಲಿ ತೊಡಗಿವೆ. ಇದನ್ನು ತಡೆಯಲು ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಹೋರಾಟಗಳನ್ನು ನಡೆಸಲಾಗುವುದು. ಇದರಿಂದ ನಿಯಮ ಉಲ್ಲಂಘಿಸಿದ ರೆಸಾರ್ಟ್‍ಗಳನ್ನು ತೆರವುಗೊಳಿಸಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಆದ್ದರಿಂದ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಮತ್ತು ನಗರೀಕರಣಕ್ಕೆ ಹಣ ಹೂಡಿಕೆ ಮಾಡುವವರು ಸ್ವಲ್ಪ ಯೋಚಿಸುವುದು ಅಗತ್ಯ, ಇಲ್ಲದಿದ್ದರೆ ಕಾನೂನು ಕ್ರಮದಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಕರ್ನಲ್ ಮುತ್ತಣ್ಣ ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆಗೆ ಬಂದು ಲಾಭ ಮಾಡಿಕೊಂಡವರು ಲಾಭದ ಹಣವನ್ನು ಜಲಮೂಲದ ನಾಶಕ್ಕೆ ಕಾರಣವಾಗಬಲ್ಲ ರಿಯಲ್ ಎಸ್ಟೇಟ್ ಗೆ ಸುರಿಯುವ ಮೂಲಕ ಎಂಟು ಕೋಟಿ ಜನರಿಗೆ ನೀರನ್ನು ಒದಗಿಸುವ ಕಾವೇರಿ ಮಾತೆಗೆ ಅನ್ಯಾಯ ಮಾಡುತ್ತಿದ್ದಾರೆ. ಲೇಔಟ್, ರೆಸಾರ್ಟ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡಬೇಕೆನ್ನುವ ಆಸಕ್ತಿ ಇರುವವರು ಮೈಸೂರು, ಬೆಂಗಳೂರಿನಲ್ಲಿ ಮಾಡಲಿ. ಕಾವೇರಿ ನಾಡು ಕೊಡಗಿನಿಂದ ಲಾಭ ಮಾಡಿಕೊಂಡು ಕೊಡಗನ್ನು ನಾಶ ಮಾಡುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಯಮ ಬಾಹಿರ ಭೂಪರಿವರ್ತನೆಯಿಂದ ವಿರಾಜಪೇಟೆ, ಗೋಣಿಕೊಪ್ಪಲು ಮತ್ತು ಪೆÇನ್ನಂಪೇಟೆ ದಕ್ಷಿಣ ಕೊಡಗಿನಲ್ಲಿ ಮೈಸೂರು ಗಾತ್ರದ ದೊಡ್ಡ ನಗರವಾಗಲಿದೆ. ಅದೇ ರೀತಿ ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆ ಉತ್ತರ ಕೊಡಗಿನ ಮತ್ತೊಂದು ದೊಡ್ಡ ಸಿಂಗಲ್ ಸಿಟಿಯಾಗಲಿದೆ. ಕೊಡಗಿಗೆ ಹೊರ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಬರುವುದರಿಂದ ಸ್ಥಳೀಯ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಮುಖ್ಯವಾಗಿ ಕಾವೇರಿ ನೀರನ್ನು ಒದಗಿಸುವ ಶಕ್ತಿಯನ್ನು ಕೊಡಗು ಕಳೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊಡಗಿನ ಹಿತವನ್ನು ಕಾಯಲು ಮುಂದಾಗಬೇಕು. ನಿಯಮ ಬಾಹಿರ ಭೂಪರಿವರ್ತನೆಗಳನ್ನು ತಡೆಯಬೇಕು. ಕೊಡಗನ್ನು ಉಳಿಸಿಕೊಳ್ಳಲು ಸ್ಥಳೀಯ ಜನ ಸ್ವಯಂ ಪ್ರೇರಿತರಾಗಿ ಪರಿಸರ ಮತ್ತು ಜಲಮೂಲದ ಪರ ಹೋರಾಟಕ್ಕೆ ದುಮುಕಬೇಕು ಎಂದು ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆದಕಲ್ ಗ್ರಾ.ಪಂ ಸದಸ್ಯ ಜಿ.ಡಿ.ಶಿವಕುಮಾರ್, ಕೊಡಗು ರಕ್ಷಣಾ ವೇದಿಕೆಯ ಉಪಾಧ್ಯಕ್ಷ ವೈ.ಟಿ.ಗೋಪಿನಾಥ್, ಪ್ರಮುಖರಾದ ಉಳುವಾರನ ಗಯ ಹಾಗೂ ಉಳುವಾರನ ಪ್ರಜ್ವಲ್ ಉಪಸ್ಥಿತರಿದ್ದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*