ಮಡಿಕೇರಿ ಸೆ.23 : ಕೊಡಗು ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಸೆ.30 ಕುಶಾಲನಗರದಲ್ಲಿ ಜಿಲ್ಲಾ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ತಿಳಿಸಿದರು.
ನಗರದಲ್ಲಿ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ರೈತ ಸಹಕಾರ ಭವನದಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ಕೊಡುಗೆ ಮತ್ತು ಶಾಲೆಗಳ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಜಿಲ್ಲೆಯ ಅನುದಾನ ರಹಿತ ಶಾಲೆಯ ಎಲ್ಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಒಕ್ಕೂಟದ ಅಧ್ಯಕ್ಷ ಕೋಳೇರ ಝರುಗಣಪತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎ.ಎಸ್. ಪೊನ್ನಣ್ಣ, ಮಂತರ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾಕುಶಾಲಪ್ಪ, ಎಸ್.ಎಲ್.ಬೋಜೆಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಎ.ಸೌಮ್ಯ ಪೊನ್ನಪ್ಪ, ಹಾಗೂ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಮುಖರಾದ ಡಾ.ಸಿ.ಜಿ.ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 120 ಅನುದಾನ ರಹಿತ ಶಾಲೆಗಳಿದ್ದು, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳು ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದ ಹಲವಾರು ತೊಂದರೆಗಳನ್ನು ಎದುರಿಸುತ್ತಿದೆ. ಗ್ರಾಮಿಣ ಮಟ್ಟದ ಶಾಲೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ ಎಂದ ಅವರು, ಸರ್ಕಾರಿ ಶಿಕ್ಷಕರಿಗೆ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಂ.ಟಿ.ದಾಮೋದರ್, ಕಾನೂನು ಸಲಹೆಗಾರ ಎಂ.ಎಸ್.ಪೂವಯ್ಯ, ಸದಸ್ಯರಾದ ಮಣಿ ಮಹಮ್ಮದ್, ಪಿ.ಎಂ.ಮೋಹನ್ ಉಪಸ್ಥಿತರಿದ್ದರು.