ಮಡಿಕೇರಿ ಸೆ.27 : ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ‘ಕೊಡವ ಅಭಿವೃದ್ಧಿ ನಿಗಮ’ ಕೇವಲ ಒಂದು ಚುನಾವಣಾ ಗಿಮಿಕ್ ಆಗಿತ್ತಷ್ಟೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರತಾಪ ಸಿಂಹ, ಅವರು ಹಿಂದಿನ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣಾ ಹಂತದಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ, 10 ಕೋಟಿ ರೂ. ಅದಕ್ಕಾಗಿ ಮೀಸಲಿಟ್ಟಿದೆಯೆಂದು ತಿಳಿಸಿತ್ತು. ಆದರೆ, ಆದೇಶ ಪತ್ರದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲವೆಂದು ತಿಳಿಸಿದರು.
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಸರ್ಕಾರದ ಆದೇಶ ಪತ್ರದಲ್ಲಿ ಅದಕ್ಕಾಗಿ ಯಾವ ಲೆಕ್ಕ ಶೀರ್ಷಿಕೆಯಲ್ಲಿ ಹಣ ಮೀಸಲಿಡಲಾಗಿದೆ, ನಿಗಮದಿಂದ ನಡೆಯಬೇಕಾದ ಕಾರ್ಯಗಳು, ಕಛೇರಿ ಸಿಬ್ಬಂದಿಗಳು ಇತ್ಯಾದಿ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ನಮೂದಾಗಿರಬೇಕು. ಆದರೆ, ಹಿಂದಿನ ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಅಂತಹ ಯಾವುದೇ ಮಾಹಿತಿಗಳಿಲ್ಲವೆಂದು ಆದೇಶ ಪತ್ರವನ್ನು ಪ್ರದರ್ಶಿಸಿದರು.
2020ನೇ ಸಾಲಿನಲ್ಲಿ ಸರ್ಕಾರ ರಚಿಸಿದ ಮರಾಠ ಅಭಿವೃದ್ಧಿ ನಿಗಮದ ಆದೇಶದಲ್ಲಿ ಅತ್ಯಂತ ಸ್ಪಷ್ಟವಾಗಿ ನಿಗಮಕ್ಕೆ ಮೀಸಲಿಟ್ಟ 50 ಕೋಟಿ ಹಣದ ಬಗ್ಗೆ, ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಆದೇಶದಲ್ಲಿ ಅದಕ್ಕೆ ಮೀಸಲಿಟ್ಟ 500 ಕೋಟಿಯ ಬಗ್ಗೆ, ಒಕ್ಕಲಿಗರ ಅಭಿವೃದ್ಧಿ ನಿಗಮದ ಆದೇಶದಲ್ಲಿ ಅದಕ್ಕೆ ಮೀಸಲಿಟ್ಟ 500 ಕೋಟಿ ಹಾಗೂ ಸಿಬ್ಬಂದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಆದರೆ, ಕೊಡವ ಅಭಿವೃದ್ಧಿ ನಿಗಮದ ಆದೇಶದಲ್ಲಿ ಇಂತಹ ಯಾವುದೇ ವಿಚಾರಗಳಿಲ್ಲ. ಸಂಸದರು ಹೇಳಿರುವಂತೆ ಕೊಡವ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಮೀಸಲಿಟ್ಟಿದ್ದರೆ, 2023ರ ಫೆಬ್ರವರಿಯ ಬಜೆಟ್‍ನಲ್ಲಿ ಸರ್ಕಾರ ಅದನ್ನು ತೋರಿಸಬೇಕಿತ್ತು. ಆ ಕಾರ್ಯವೂ ನಡೆದಿಲ್ಲವೆಂದರು.
::: ಚುನಾವಣಾ ಕಾಲದಲ್ಲಿ ಸಂಸದರ ಭೇಟಿ :::
ಸಂಸದ ಪ್ರತಾಪ ಸಿಂಹ ಅವರು ವಿರಾಜಪೇಟೆಯ ಕಾರ್ಯಕ್ರಮಕ್ಕೆ ಕೇವಲ ಚುನಾವಣಾ ಪೀಠಿಕೆ ಹಾಕುವುದಕ್ಕಷ್ಟೆ ಬಂದಿದ್ದಾರೆ. 2019 ರಿಂದ ಅವರು ತಮ್ಮ ಸಂಸದರ ನಿಧಿಯಿಂದ ಕೊಡಗಿಗೆ ಎಷ್ಟು ವಿನಿಯೋಗಿಸಿದ್ದಾರೆ ಎನ್ನುವ ಮಾಹಿತಿಯನ್ನು ಕೇಳಿದ್ದೇವೆ. ಬಹುಶಃ ಚಿಕ್ಕಾಸನ್ನು ಅವರು ಕೊಡಗಿಗೆ ವಿನಿಯೋಗಿಸಿಲ್ಲವೆಂದು ಟೀಕಿಸಿದರು.
ಮುಂದಿನ ಚುನಾವಣೆಯಲ್ಲಿ ಪ್ರತಾಪ ಸಿಂಹ ಅವರನ್ನು ಜನರೆ ಮನೆಗೆ ಕಳುಹಿಸುತ್ತಾರೆ ಎಂದು ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮೂಡ ಮಾಜಿ ಅಧ್ಯಕ್ಷ ಎ.ಸಿ.ಚುಮ್ಮಿ ದೇವಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಹಾಗೂ ಕಾಂಗ್ರೆಸ್ ಸೈನಿಕ ಘಟಕದ ಅಧ್ಯಕ್ಷ ಬೊಳಿಯಾಡಿರ ಗಣೇಶ್ ಉಪಸ್ಥಿತರಿದ್ದರು.










