ಮಡಿಕೇರಿ ಸೆ.27 : ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಂಸದ ಪ್ರತಾಪ್ ಸಿಂಹ ಅವರು ತಿರುಗೇಟು ನೀಡಿರುವ ಕಾರಣಕ್ಕೆ ರಾಜಕೀಯ ಜಿದ್ದು ಸಾಧಿಸುತ್ತಿರುವ ವಲಸೆ ರಾಜಕಾರಿಣಿ, ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ಅವರು ಹತಾಶರಾಗಿ ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕ್ಷೇತ್ರದ ಪ್ರಜ್ಞಾವಂತ ಮತದಾರರು ಎರಡು ಬಾರಿ ಪ್ರಚಂಡ ಬಹುಮತದೊಂದಿಗೆ ಪ್ರತಾಪ್ ಸಿಂಹ ಅವರನ್ನು ಸಂಸದರನ್ನಾಗಿ ಚುನಾಯಿಸಿ ಕಳುಹಿಸಿರುವುದೇ ಸಂಸದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ತಮ್ಮ ಕ್ಷೇತ್ರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಸಂಸದರು, ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಸಂಕೇತ್ ಪೂವಯ್ಯ ಅವರು ಪರಿಶೀಲಿಸಿ ಎಷ್ಟು ಕೋಟಿ ಅನುದಾನ ತಂದಿದ್ದಾರೆ ಎಂಬ ಬಗ್ಗೆ ವಾಸ್ತವ ಅರಿತು ನಂತರ ಆರೋಪ ಮಾಡಲಿ. ಕಾಂಗ್ರೆಸಿಗರು ತಮ್ಮ ರಾಜಕೀಯ ಕಾರಣಕ್ಕಾಗಿ ಸಂಸದರ ಮೇಲೆ ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸಲೆಯತ್ನಿಸುವುದು ಬೇಡ. ಕೊಡಗಿನ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ದೇವೇಗೌಡರು ಈ ದೇಶದ ಮಾಜಿ ಪ್ರಧಾನಿಗಳಾಗಿದ್ದು, ಹಿರಿಯ ಅನುಭವಿ ರಾಜಕಾರಿಣಿಗಳಾಗಿದ್ದಾರೆ. ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು ಸನಾತನ ಧರ್ಮ ಕಲಿಸಿರುವ ಸಂಸ್ಕಾರವಾಗಿದೆ.
ಇದನ್ನು ವಿರೋಧಿಸುತ್ತಿರುವ ಸಂಕೇತ್ ಪೂವಯ್ಯ ಅವರು ಈ ಹಿಂದೆ ಯಾರ ಯಾರ ಕಾಲಿಗೆ ಬಿದ್ದಿದ್ದರು ಎಂದು ನೆನಪು ಮಾಡಿಕೊಳ್ಳಲಿ. ದೇಶ ಬಿಟ್ಟು ಹೋದ ವಿಜಯ್ಯಮಲ್ಯ ಅವರ ಜನತಾ ಪಕ್ಷದಿಂದ ಟಿಪ್ಪುವಿನ ಖಡ್ಗವನ್ನು ತಲೆ ಮೇಲೆ ಹೊತ್ತು ಚುನಾವಣೆಗೆ ಹೋದಾಗ ಕೊಡಗಿನ ಜನ ಪಾಠ ಕಲಿಸಿರುವುದನ್ನು ಮರೆತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಜೆ.ಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದಾಗ ಪ್ರಜ್ಞಾವಂತ ಮತದಾರ ಹೀನಾಯವಾಗಿ ಸೋಲಿಸಿರುವುದನ್ನು ಮರೆತಂತಿದೆ. ನಂತರ ಪಕ್ಷಕ್ಕೆ ಕೈ ಕೊಟ್ಟು ಸೋನಿಯ ಗಾಂಧಿಯವರ ಕಾಲಿಗೆ ನಮಸ್ಕರಿಸುತ್ತಿರುವ ಸಂಕೇತ್ ಪೂವಯ್ಯ ಅವರಿಗೆ ಬಿಜೆಪಿ ಸಂಸದರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ರಾಬಿನ್ ದೇವಯ್ಯ ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಬಿಟ್ಟಭಾಗ್ಯಗಳಿಗೆ ಅಗ್ಯವಿರುವ ಹಣ ಹೊಂದಿಸಲಾಗದೆ ಪರದಾಡುತ್ತಿರುವ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದೆ ದಯಾನೀಯ ಸ್ಥಿತಿಯಲ್ಲಿದೆ. ಜನರ ಕನಿಷ್ಠ ಮೂಲಭೂತ ಅಗತ್ಯತೆಗಳನ್ನು ಪೂರೈಸಲಾಗದ ರಾಜ್ಯ ಸರ್ಕಾರದ ವಿರುದ್ಧ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಜನತೆ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ತಮ್ಮ ತಪ್ಪುಗಳನ್ನು ಮರೆಮಾಚಲು ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರ ಆಕ್ರೋಶದ ಪ್ರತಿಕ್ರಿಯೆಗಳಿಂದ ಹೇಗಾದರು ತಪ್ಪಿಸಿಕೊಳ್ಳಲು ಕಾಂಗ್ರೆಸಿಗರು ಕೇಂದ್ರ ಸರರ್ಕಾರದ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡಗಿನ ಜನರ ಸಂಕಷ್ಟ ಇಂದು, ನೆನ್ನೆಯದಲ್ಲ, 70 ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಕೊಡಗಿನ ಬೆಳೆಗಾರರ ಸಂಕಷ್ಟಗಳನ್ನು ಏಕೆ ಪರಿಹರಿಸಲಿಲ್ಲ ಎನ್ನುವ ಪ್ರಶ್ನೆಗೆ ಮೊದಲು ಉತ್ತರ ನೀಡಲಿ. ಬಿಜೆಪಿ ಸರ್ಕಾರ ಕೊಡಗಿಗೆ ಕೊಡವ ಅಭಿವೃದ್ಧಿ ನಿಗಮಕ್ಕೆ ಹಣ ನೀಡಿರುವುದು ಸುಳ್ಳು ಎಂದು ಹೇಳಿಕೆ ನೀಡಲಾಗಿದೆ, ಅಲ್ಲದೆ ಶಾಸಕ ಪೊನ್ನಣ್ಣ ಅವರು ಕೂಡ ಇದನ್ನೇ ಹೇಳುತ್ತಿದ್ದಾರೆ. ಹಾಗಾದರೆ 2022ನೇ ಸಾಲಿನ ಬಜೆಟ್‍ನಲ್ಲಿ ಬಿಜೆಪಿ ಸರ್ಕಾರ 10 ಕೋಟಿ ರೂ. ವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಿ, ಆ ಹಣದಲ್ಲಿ 6 ಕೋಟಿ ಫೆಡರೇಶನ್ ಆಫ್ ಕೊಡವ ಸಮಾಜಕ್ಕೆ, 3 ಕೋಟಿ ರೂ. ವಿವಿಧ ಕೊಡವ ಸಮಾಜಗಳ ಅಭಿವೃದ್ಧಿಗೆ, 1 ಕೋಟಿ ರೂ.ಗಳನ್ನು ಕೊಡವ ಮತ್ತು ಅಮ್ಮ ಕೊಡವ ಟ್ರಸ್ಟ್ ಗೆ ನೀಡಿ ಇದಕ್ಕೆ ಆಡಳಿತಾತ್ಮಕ ಒಪ್ಪಿಗೆಯೊಂದಿಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿ, ನಿರ್ಮಿತಿ ಕೇಂದ್ರಕ್ಕೆ ಹಣ ರವಾನೆಯಾಗಿರುವುದನ್ನು ಯಾಕೆ ತಡೆ ಹಿಡಿದಿದ್ದೀರಿ ಎಂದು ರಾಬಿನ್ ದೇವಯ್ಯ ಪ್ರಶ್ನಿಸಿದ್ದಾರೆ.
ಕೊಡವ ಅಭಿವೃದ್ಧಿ ನಿಗಮ 2023ರ ಸಾಲಿನ ಬಜೆಟ್ ನ ನಂತರ ಘೋಷಣೆಯಾಗಿದೆ. 2023 ಮಾ.18 ರಂದು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ನಿಗಮ ಘೋಷಣೆ ಮಾಡಿದ್ದು, ಈಗಿರುವ ಸರ್ಕಾರ ಹೆಚ್ಚಿನ ಹಣ ನೀಡಬೇಕು ಎಂದು ತಿಳಿಸಿದ್ದಾರೆ.
::: ರೈತರಿಗೆ ಅನ್ಯಾಯ :::
ರೈತರ ಬಗ್ಗೆ ಕಾಳಜಿ ಇರುವುದಕ್ಕೆ ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂ.ಗಳನ್ನು ರೈತರ ಖಾತೆಗೆ ಹಾಕುತ್ತಿದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ.ಗಳನುಕೀಗಿನ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದ್ದು, ಇದು ರೈತರಿಗೆ ಮಾಡಿದ ಅನ್ಯಾಯವಲ್ಲವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಹಿಂದೆ ಬಿಜೆಪಿ ಸರ್ಕಾರ ನೀಡಿದ ರೈತ ಪರ ಯೋಜನೆಗಳನ್ನು ರದ್ದು ಮಾಡಲಾಗಿದೆ.
ರೈತರು ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಇದ್ದ “ವಿದ್ಯಾನಿಧಿ” ಯನ್ನು ರದ್ದುಗೊಳಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪಿಸುವ ಯೋಜನೆ ರದ್ದು ಮಾಡಿ ಗೋವಿನ ಹತ್ಯೆಗೆ ಬೆಂಬಲ ನೀಡಲಾಗುತ್ತಿದೆ, ರೈತರ ಪರವಾಗಿದ್ದ ಎ.ಪಿ.ಎಂ.ಸಿ. ಕಾಯ್ದೆಯನ್ನು ರದ್ದು ಮಾಡಲಾಗಿದೆ, ರೈತರಿಗೆ 10 ಸಾವಿರ ರೂ. ನೆರವು ನೀಡುತ್ತಿದ್ದ “ಭೂಸಿರಿ” ಕಾಯ್ದೆ, ಕೃಷಿ ಮಹಿಳೆಯರಿಗೆ ಪ್ರತಿ ತಿಂಗಳು ನೀಡುತ್ತಿದ್ದ ‘ಭೂಸಿರಿ’ ಯೋಜನೆಯ ‘ಶ್ರಮಶಕ್ತಿ’, ರೈತರ ಜಮೀನಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ “ಜಲನಿಧಿ” ಯೋಜನೆ ಮತ್ತು ಹಾಲು ಉತ್ಪಾದಕರಿಗೆ ನೆರವಾಗುವ “ಕ್ಷೀರ ಸಮೃದ್ಧಿ” ಯೋಜನೆ ರದ್ದು ಮಾಡಲಾಗಿದೆ. ಇದೆಲ್ಲವೂ ರೈತ ವಿರೋಧಿ ನೀತಿ ಅಲ್ಲವೇ, ಕೇಂದ್ರ ಸರ್ಕಾರ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯೆಂಬ ಏಕರೂಪ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದು ಮಾಡಿ ಮತ್ತೆ “ಮೆಕಾಲೆ” ಶಿಕ್ಷಣ ನೀತಿಯನ್ನು ತರುವ ಪ್ರಯತ್ನ ನಡೆಯತ್ತಿದೆ. ಬಿಜೆಪಿ ಅವಧಿಯಲ್ಲಿನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಮತ್ತೆ ಹಳೆಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಯತ್ನಿಸಲಾಗುತ್ತಿದೆ. ಜೊತೆಗೆ ಟಿಪ್ಪುವಿನ ಪಠ್ಯ ತರಬೇಕೆಂದು ಪ್ರಯತ್ನಿಸುತ್ತಿದ್ದು, ಇದು ಹಿಂದೂ ವಿರೋಧಿ ನೀತಿ ಅಲ್ಲವೇ ಎಂದು ರಾಬಿನ್ ದೇವಯ್ಯ ಪ್ರಶ್ನಿಸಿದ್ದಾರೆ.
ಎಸ್‍ಸಿ, ಎಸ್‍ಟಿಗೆ ಮೀಸಲಾಗಿದ್ದ ಅಗ್ನಿವೀರ್ ತರಬೇತಿ, ಅಸ್ಪೃಶ್ಯತೆ ನಿವಾರಣೆಯ ವಿನಯ ಸಾಮರಸ್ಯ ಸ್ಕೀಂನ್ನು ರದ್ದು ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿದ್ದ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳ ಜಾರಿಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, ಇದು ಆ ಪಂಗಡಗಳಿಗೆ ಮಾಡಿದ ಅನ್ಯಾಯ ಅಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ಕೆ.ಜಿ ಅಕ್ಕಿ ಉಚಿತ ನೀಡುತ್ತೇವೆ ಎಂದು ಗ್ಯಾರಂಟಿ ಭಾಗ್ಯದಲ್ಲಿ ಘೋಷಿಸಲಾಗಿದೆ. ಆದರೆ ಇಂದು ಕೇಂದ್ರ ಸರ್ಕಾರ ನೀಡುತ್ತಿರುವ 5ಕೆ.ಜಿ ಅಕ್ಕಿ ಬಡವರ ಹೊಟ್ಟೆ ತುಂಬಿಸುತ್ತಿದೆ ಎನ್ನುವುದನ್ನು ಕಾಂಗ್ರೆಸ್ಸಿಗರು ಮರೆಯಬಾರದು ಎಂದು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆಯೊಂದನ್ನು ನೀಡಿ ಕಾವೇರಿ ನೀರಿನ ಸಮಸ್ಯೆಗೆ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಹೇಳಿದ್ದಾರೆ. ಸಚಿವರು ಮೊದಲು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು ಮುಖ್ಯಮಂತ್ರಿಗಳಿಗೆ ಹೇಳಲಿ. ಸಿ.ಡಬ್ಲ್ಯೂ.ಆರ್.ಸಿ ಯಲ್ಲಿ ಸಮರ್ಪಕ ವರದಿಯನ್ನು ಮಂಡಿಸಿ, ಸುಪ್ರೀಂಕೋರ್ಟ್‍ಗೆ ಸರಿಯಾದ ವಕೀಲರನ್ನು ನೇಮಿಸಿ ವಾದ ಮಂಡಿಸುವಂತೆ ಮಾಡಲಿ. ನಂತರ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶ ಮಾಡುವಂತೆ ಸಲಹೆ ನೀಡುವ ನೈತಿಕತೆಯನ್ನು ಪಡೆದುಕೊಳ್ಳಲಿ ಎಂದು ರಾಬಿನ್ ದೇವಯ್ಯ ತಿಳಿಸಿದ್ದಾರೆ.