ಮಡಿಕೇರಿ ಸೆ.27 : ಮೀನುಗಾರಿಕೆ ಇಲಾಖೆ ವತಿಯಿಂದ ನಗರದ ಎಫ್‍ಎಮ್‍ಸಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಕ್ಷೇತ್ರಕಾರ್ಯ ಭೇಟಿ ಕಾರ್ಯಕ್ರಮ ನಡೆಯಿತು.
ಗುಹ್ಯದಲ್ಲಿರುವ ಅಕ್ವಾ ವೆಂಚರ್ ಮತ್ಸ್ಯ ಸೇವಾ ಕೇಂದ್ರದಲ್ಲಿ ಒಂದು ದಿನದ ತರಬೇತಿ ನಡೆಯಿತು.
ಫಾರಂನ ಮಾಲೀಕ ಶ್ಯಾಮ್ ಅಯ್ಯಪ್ಪ ಅವರು ತಾವು ಕೈಗೊಂಡಿರುವ ಅಕ್ವಾಫೋನಿಕ್ ಮಾದರಿಯಲ್ಲಿ ಮೇಲೆ ಟೊಮೆಟೊ, ಸೌತೆಕಾಯಿ, ಕುಂಬಳಕಾಯಿ, ಮೂಲಂಗಿ ಮುಂತಾದ ತರಕಾರಿ, ಪಾಲಕ್, ಲೆಟ್ಯುಸ್, ಜುಕಣಿ ಮುಂತಾದ ಹಸಿರು ಸೊಪ್ಪು ಮತ್ತು ಸ್ಟ್ರಾಬೆರಿ ಹಣ್ಣಿನ ಬೆಳೆಗಳು, ಹಾಗೆಯೇ ಮೀನು ಮರಿ ಪಾಲನೆ ನೀರನ್ನು ಶುದ್ಧೀಕರಿಸುವ ವಿಧಾನದ ಮೂಲಕ ಕೈಗೊಳ್ಳುವುದನ್ನು ವಿವರಿಸಿದರು.
ಸ್ಥಳೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಕಂಡುಕೊಳ್ಳುವ ವಿಧಾನ ಗಿಡಗಳನ್ನು ಬೆಳೆಸುವಾಗ ಕೊಕೊಪಿಟ್, ಕ್ಲೇ ಬಾಲ್ಸ್ ಮುಂತಾದ ವಸ್ತುಗಳ ಬಳಕೆಯ ಪ್ರಮಾಣವನ್ನು ಪ್ರಾಯೋಗಿಕವಾಗಿ ತೋರಿಸಲಾಯಿತು. ಪಾಲನೆಯಲ್ಲಿರುವ ಸ್ಪಾನ್, ಫ್ರೈ ಮೀನುಗಳ ಪೋಷಣೆಯ ವಿಧಾನದ ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಬಯೋಫ್ಲಾಕ್ ಟೆಕ್ನಾಲಜಿ ಬಳಸಿ ತಿಲಾಪಿಯ ಮೀನು ಮತ್ತು ಅಲಂಕಾರಿಕ ಮೀನುಗಳಾದ ಕೋಯಿ, ಗೋಲ್ಡ್ ಫಿಶ್ ಮುಂತಾದ ಮೀನುಗಳ ಉತ್ಪಾದನೆಯ ಕುರಿತ ಮಾಹಿತಿ ವಿನಿಮಯ ಮಾಡಿದರು. ಬೆಳೆದ ಮೀನಿನ ಮಾರುಕಟ್ಟೆ ವಿಧಾನದ ಕುರಿತ ವಿಚಾರ ವಿನಿಮಯ ಮಾಡಿದರು.
ತಾವು ಬೆಳೆಸಿದ ಮೀನಿನಿಂದ ತಯಾರಿಸಿದ ಮೌಲ್ಯ ವರ್ಧಿತ ಉತ್ಪನ್ನಗಳ ಮಾಹಿತಿ ವಿಶೇಷವಾಗಿತ್ತು. ಶ್ಯಾಂ ಅವರ ಪತ್ನಿ ನಮಿತಾರವರ ರೆಸಿಪಿಯಲ್ಲಿ ತಯಾರಾದ ಮೀನಿನ ಟಿಕ್ಕ, ಕಬಾಬ್ ಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.
ಪ್ರಧಾನಮಂತ್ರಿ ಸ್ವ ಉದ್ಯಮ ಯೋಜನೆಯ ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಹೇಗೆ ಮಾದರಿ ಕೃಷಿಕರಾಗಬಹುದು ಮತ್ತು ಗ್ರಾಮದ ಕೆಲವು ಜನರಿಗೆ ಉದ್ಯೋಗದಾತರಾಗಬಹುದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿ ಅಕ್ವಾ ವೆಂಚರ್ನ ಶ್ಯಾಮ್ ಅಯ್ಯಪ್ಪ ಅವರು ವಿದ್ಯಾರ್ಥಿಗಳಿಗೆ ಪ್ರೇರಣೆಯಾದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನ ಭರತ್ ಇಲಾಖೆಯಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ, ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಸಾಕಣೆಯ ಕುರಿತು ಮಾಹಿತಿ ನೀಡಿದರು.
ಆಸಕ್ತ ವಿದ್ಯಾರ್ಥಿಗಳು ಮನೆಯಲ್ಲಿ ಸಣ್ಣ ಸ್ಥಳಾವಕಾಶದಲ್ಲಿ ಹೇಗೆ ಅಲಂಕಾರಿಕ ಅಥವಾ ಆಹಾರದ ಮೀನು ಸಾಕಾಣೆ ಮಾಡಬಹುದು ಎನ್ನುವ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಹೇಮಂತ್, ಸಮಾಜ ಕಾರ್ಯ ಉಪನ್ಯಾಸಕರಾದ ಮಧುಕರ್ ಮತ್ತು ಕಾಂಚನ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಜೀತ್ ವಂದಿಸಿದರು.









