ಕುಶಾಲನಗರ ಸೆ.27 : ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಮುಕ್ತ ನಡೆಸಲಾದ ಈದ್ ಮಿಲಾದ್ ಹಬ್ಬದ ಅಂಗವಾಗಿ ಕುಶಾಲನಗರ ಹಾಗೂ ಕೂಡಿಗೆಯಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥ ನಡೆಯಿತು.
ಕುಶಾಲನಗರದ ದಾರುಲ್ ಉಲೂಂ ಮದ್ರಸ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ವತಿಯಿಂದ ಕುಶಾಲನಗರದ ಮುಖ್ಯ ರಸ್ತೆ ಹಾಗೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಾಯಿತು. ಕುಶಾಲನಗರದ ಶಾದಿ ಮಹಲ್ ನಿಂದ ಪ್ರಾರಂಭಗೊಂಡ ಜಾಥ, ಮುಖ್ಯ ರಸ್ತೆ ಮೂಲಕ ಪಟ್ಟಣದ ಕಾರ್ಯಪ್ಪ ವೃತ್ತಕ್ಕೆ ತಲುಪಿತು. ಕಾರ್ಯಪ್ಪ ವೃತ್ತದಲ್ಲಿ ಪುಟಾಣಿ ಮಕ್ಕಳನ್ನು ಒಳಗೊಂಡಂತೆ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನೀಡಲಾಯಿತು.
ವಿದ್ಯಾರ್ಥಿಗಳು ಆಕರ್ಷಕ ಸಮವಸ್ತ್ರಗಳನ್ನು ಧರಿಸಿ ಗಮನ ಸೆಳೆದರು. ನಂತರ ದಂಡಿನಪೇಟೆ ಮೂಲಕ ಸಾಗಿದ ಮೆರವಣಿಗೆ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಮೂಲಕ ಆಗಮಿಸಿ ಶಾಧಿ ಮಹಲ್ ನತ್ತ ಸಾಗಿತು. ಮೆರವಣಿಗೆಯಲ್ಲಿ ಪ್ರವಾದಿಯವರ ಶಾಂತಿ, ಸಾಹೋದರ್ಯತೆಯ ಸಂದೇಶಗಳನ್ನು ಸಾರಿ ಸಮಾಜಕ್ಕೆ ಶಾಂತಿ, ಸಹೋದರತೆಯ ಸಂದೇಶವನ್ನು ನೀಡಿದರು.
ಕೂಡಿಗೆಯ ಮೊಹಿಯದ್ದೀನ್ ಜುಮಾ ಮಸೀದಿ ಹಾಗೂ ಮುನವ್ವಿರುಲ್ ಇಸ್ಲಾಂ ಅರೆಬಿಕ್ ಮದ್ರಸ ಆಶ್ರಯದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದ ಅಂಗವಾಗಿ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ನಡೆಯಿತು. ಈ ಸಂದರ್ಭ ಕೂಡಿಗೆ ಹಿಂದೂಪರ ಸಂಘಟನೆಗಳಿಂದ ಇದ್ ಮಿಲಾದ್ ಜಾಥದಲ್ಲಿ ಪಾಲ್ಗೊಂಡ ಮುಸಲ್ಮಾನ್ ಸಹೋದರರಿಗೆ ತಂಪು ಪಾನೀಯಗಳನ್ನು ಹಾಗೂ ಸಿಹಿತಿನಿಸುಗಳನ್ನು ನೀಡಿ ಸಮಾಜಕ್ಕೆ ಸಾಹೋದರ್ಯತೆಯ ಸಂದೇಶಗಳನ್ನು ಸಾರಿದರು.
ಈ ಸಂದರ್ಭ ಕುಶಾಲನಗರ ಹಾಗೂ ಕೂಡಿಗೆಯ ಕಮಿಟಿ ಆಡಳಿತ ಮಂಡಳಿಯವರು, ಆಯಾ ಮದ್ರಸದ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.