ಮಡಿಕೇರಿ ಸೆ.28 : ಚೆಟ್ಟಳ್ಳಿ ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಮ್ ಜಮಾಹತ್ ಕಮಿಟಿ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಕಂಡಕರೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಮೌಲಿದ್ ಪಾರಾಯಣದೊಂದಿಗೆ ಈದ್ ಮಿಲಾದ್ ಕಾರ್ಯಕ್ರಮ ಆರಂಭಗೊಂಡಿತ್ತು. ಧ್ವಜಾರೋಹಣವನ್ನು ಮಹಲ್ ಅಧ್ಯಕ್ಷರಾದ ಪಿ.ಹೆಚ್ ಗಫೂರ್ ನೇರವೇರಿಸಿದರು.
ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಪ್ರಾರ್ಥನೆ ನೆರವೇರಿಸಿದರು.
ನಂತರ ಕಂಡಕರೆಯಿಂದ ಕಾಫಿಬೋರ್ಡ್ ವರೆಗೆ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿ ಸಂದೇಶ ನೀಡಿದ, ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಆಧುನಿಕ ಯುಗದ ಭರಾಟೆಯಲ್ಲಿ ಮುಳುಗುತ್ತಿರುವ ಇಂದಿನ ಯುವ ಸಮೂಹ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನಚರಿತ್ರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಯುವ ಸಮೂಹದ ಯಾವುದೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಶಿಸ್ತಿನಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಇಡೀ ವಿಶ್ವಕ್ಕೆ ಸಾರಿರುವ ಸಂದೇಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕಾಗಿದೆ.
ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ, ಪ್ರವಾದಿ ಪೈಗಂಬರ್ ಅವರು ನೀಡಿರುವ ಸಂದೇಶಗಳು ಇಂದಿನ 21 ನೇ ಶತಮಾನದಲ್ಲಿ ಕೂಡ ಅಚ್ಚಳಿಯದೆ ಉಳಿದಿದೆ. ಕೇವಲ ಒಂದೋ ಒಂದು ಭಾವಚಿತ್ರವಿಲ್ಲದೆ ಇಡೀ ವಿಶ್ವ ಮಾನವ ಕುಲದ ಮನಸ್ಸುಗಳಲ್ಲಿ ಪ್ರವಾದಿ ಪೈಗಂಬರ್ ಅವರು ಸ್ಥಾನ ಪಡೆದಿದ್ದಾರೆ. ಶಾಂತಿಯ ಸಂದೇಶವನ್ನು ಎತ್ತಿ ಹಿಡಿದಿರುವ ಪ್ರವಾದಿ ಅವರ ಜೀವನ ಶೈಲಿಯನ್ನು ಇಂದಿನ ಯುವ ಸಮೂಹ ಅಳವಡಿಸಿಕೊಂಡು, ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕಾಗಿದೆ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಹೇಳಿದರು.
ಮಿಲಾದ್ ಸಂದೇಶ ಜಾಥಾದಲ್ಲಿ ಪುಟಾಣಿಗಳು ಗಮನ ಸೆಳೆದರು. ಕಂಡಕರೆ ಹಯಾತುಲ್ ಇಸ್ಲಾಮ್ ಮದರಸ ಮೈದಾನದಲ್ಲಿ ವಿದ್ಯಾರ್ಥಿಗಳ ಧಪ್ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.
ಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಕಂಡಕರೆ ಹಾಗೂ ಚೆಟ್ಟಳ್ಳಿ ಪಟ್ಟಣದಲ್ಲಿ ಸರ್ವಧರ್ಮೀಯರಿಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂದೇಶ ಸಾರುವ ವಚನದೊಂದಿಗೆ ಸಿಹಿ ವಿತರಿಸಲಾಯಿತು.
ಚೆಟ್ಟಳ್ಳಿ ಪೊಲೀಸ್ ಉಪ ಠಾಣಾಧಿಕಾರಿ ದಿನೇಶ್ ಅವರ ನೇತೃತ್ವದಲ್ಲಿ ಈದ್ ಮಿಲಾದ್ ಸಂದೇಶ ಜಾಥಾಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರವಾದಿ ಜನ್ಮದಿನದ ಅಂಗವಾಗಿ ಅನ್ನದಾನ ನಡೆಯಿತು.
ಈ ಸಂದರ್ಭ ಹಯಾತುಲ್ ಇಸ್ಲಾಮ್ ಮದರಸ ಮುಖ್ಯೋಪಾಧ್ಯಾಯರಾದ ಹುಸೈನ್ ಬಾದ್ಶಾ, ಸುಲೈಮಾನ್ ಸಹದಿ, ಮೊಹಮ್ಮದ್ ಉಸ್ತಾದ್, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಯೂಸುಫ್, ಕಾರ್ಯದರ್ಶಿ ಗಫೂರ್, ಮಹಲ್ ಕಾರ್ಯದರ್ಶಿ ಮೊಹಮ್ಮದ್ ರಫಿ, ಸ್ವಲಾತ್ ಕಮಿಟಿ ಅಧ್ಯಕ್ಷ ಉಸೈನ್ ಹಾಗೂ ಮತ್ತಿತ್ತರರು ಇದ್ದರು.