ಇಂಫಾಲ ಸೆ.28 : ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾದ ಹಿನ್ನೆಲೆ ಆಕ್ರೋಶಗೊಂಡ ಪ್ರತಿಭಟನಾಕಾರರು ಈಶಾನ್ಯ ರಾಜ್ಯ ಮಣಿಪುರದ ಇಂಫಾಲ್ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದು, ರಾಜಧಾನಿ ಇಂಫಾಲದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಗುರುವಾರ ಮುಂಜಾನೆ ಇಂಫಾಲ್ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಲಾಗಿದ್ದು, ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮೈತೇಯಿ ಸಮುದಾಯಕ್ಕೆ ಸೇರಿದ 17 ವರ್ಷದ ಬಾಲಕಿ ಮತ್ತು 20 ವರ್ಷದ ಯುವಕನ ಮೃತದೇಹಗಳ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.










