ಕುಶಾಲನಗರ ಸೆ.28 : ದಾರುಲ್ ಮದ್ರಸ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1498ನೇ ಜನ್ಮ ದಿನದ ಪ್ರಯುಕ್ತ “ರಹ್ಮತೇ ರಬೀಅ್ ಈದ್ ಮಿಲಾದ್” ಕಾರ್ಯಕ್ರಮವು ಕುಶಾಲನಗರದ ಶಾದಿ ಮಹಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿಲಾಲ್ ಮಸೀದಿಯ ಖತೀಬರಾದ ನಾಸರ್ ಫೈಜ಼ಿ, ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು 1400 ವರ್ಷಗಳ ಹಿಂದೆ ಶಾಂತಿ, ಸಹೋದರತೆ ಸಂದೇಶವನ್ನು ಸಾರಿದವರಾಗಿದ್ದಾರೆ. ವರ್ಣಬೇಧ ನೀತಿ ಹಾಗೂ ಇನ್ನಿತರ ಕೆಟ್ಟ ಪದ್ಧತಿ ಜಾರಿಯಲ್ಲಿದ್ದ ಕಾಲಗಟ್ಟದಲ್ಲಿ ಶಾಂತಿಯನ್ನು ಪಸರಿಸಿದ, ಪ್ರವಾದಿಯವರ ಜೀವನ ಸಂದೇಶಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಪ್ರತಿಯೊಂದು ಧರ್ಮವೂ ಶಾಂತಿಯನ್ನು ಸಾರುತ್ತದೆ. ಕುಶಾಲನಗರದಲ್ಲಿ ಪ್ರತಿಯೊಂದು ಧರ್ಮದವರು ಪರಸ್ಪರ ಸಹೋದರರಂತೆ ಜೀವಿಸುತ್ತಿದ್ದಾರೆ. ಹೊಸಕೋಟೆಯಲ್ಲಿ ನಡೆದ ಗಣೇಶ ಚತುರ್ಥಿಗೆ ಮುಸ್ಲಿಂ ಸಹೋದರರು ತಂಪು ಪಾನೀಯಗಳನ್ನು ವಿತರಿಸಿದರು.
ಕೂಡಿಗೆಯಲ್ಲಿ ನಡೆದ ಈದ್ ಮಿಲಾದ್ ಗೆ ಹಿಂದೂ ಸಹೋದರರು ತಂಪು ಪಾನೀಯಗಳನ್ನು ನೀಡಿ ಸಹೋದರತೆಯ ಸಂದೇಶವನ್ನು ಸಾರಿದ್ದಾರೆ. ಇಂತಹ ಶಾಂತಿಯ ಪಟ್ಟಣದಲ್ಲಿ ಕಾರ್ಯನಿರ್ವಹಿಸಲು ಬಹಳಷ್ಟು ಹೆಮ್ಮೆ ಹಾಗೂ ಸಂತೋಷವಾಗುತ್ತಿದೆ. ಯುವಕರು ಕೆಟ್ಟ ಚಟಗಳಿಂದ ದೂರವಿರಬೇಕು. ಯುವಕರು ದಾರಿತಪ್ಪುವುದು ಸಮಾಜಕ್ಕೆ ಮಾರಕ. ಆದ್ದರಿಂದ ಯುವಕರು ದಾರಿತಪ್ಪದಂತೆ ಪೋಷಕರು ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಹುಸೇನ್, ಸರ್ವಧರ್ಮವೂ ಶಾಂತಿಯನ್ನು ಸಾರುತ್ತದೆ. ಹಾಗೆಯೇ ಸರ್ವ ಧರ್ಮವೂ ಕೆಟ್ಟದ್ದನ್ನು ವಿರೋಧಿಸುತ್ತದೆ. ಆದ್ದರಿಂದ ಯುವ ಸಮೂಹ ಕೆಟ್ಟ ಚಟಗಳಿಂದ ದೂರವಿರಬೇಕು ಎಂದರು.
ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಮುಜಿಬ್ ರಹಮಾನ್ ಮಾತನಾಡಿ, ಬೌದ್ಧಿಕ ವಿದ್ಯಾಭ್ಯಾಸದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಪೋಷಕರು ಮಕ್ಕಳನ್ನು ಬೇಡದ ಚಟಗಳಿಂದ ದೂರವಿಸುವಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.
ಮುಖ್ಯ ಪ್ರಭಾಷಕರಾದ ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯ ಬಗ್ಗೆ ಭಾಷಣ ಮಾಡಿದರು.
ಹಿಲಾಲ್ ಮಸೀದಿ ಮಾಜಿ ಅಧ್ಯಕ್ಷರಾದ ಸಲೀಂ ಹಾಜಿ ಮಾತನಾಡಿದರು. ಹಿಲಾಲ್ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಸ್ವಾಗತಿಸಿದರು. ದಾರುಲ್ ಉಲೂಂ ಮದ್ರಸದ 1ನೇ ತರಗತಿಯಿಂದ 12ನೇ ತರಗತಿವರೆಗಿನ ಪ್ರಮುಖ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಲ್ ಅಮೀಮ್ ಜಿಲ್ಲಾಧ್ಯಕ್ಷ ಬಿ. ಹೆಚ್.ಅಹಮದ್, ಹಿಲಾಲ್ ಮಸೀದಿ ಉಪಾಧ್ಯಕ್ಷ ಹಂಸ, ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ, ಗೊಂದಿ ಬಸವನಹಳ್ಳಿ ಮದ್ರಸ ಕಾರ್ಯದರ್ಶಿ ಹಮೀದ್, ಮಾದಾಪಟ್ಟಣ ಮದ್ರಸ ಅಧ್ಯಕ್ಷ ಶರ್ಫುದ್ದೀನ್, ಫಾಳಿಲಾ ಶರೀಅತ್ ಕಾಲೇಜ್ ನ ವ್ಯವಸ್ಥಾಪಕ ಅಬ್ದುಲ್ಲಾ, ಪ್ರಮುಖರಾದ ಮುಹಮ್ಮದ್ ಅಲಿ, ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ದಾರುಲ್ ಉಲೂಂ ಮದ್ರಸದ ಶಿಕ್ಷಕ ವೃಂದದವರು ಹಾಜರಿದ್ದರು.