ಮಡಿಕೇರಿ ಸೆ.27 : ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ನೆನಪಿನಲ್ಲಿ ಕೊಡಗಿನಲ್ಲಿ ಹಲವಾರು ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಅಪ್ಪಚ್ಚಕವಿ ಅಭಿಮಾನಿಗಳ ಬಳಗದ ಅಧ್ಯಕ್ಷ ಉಳ್ಳಿಯಡ.ಎಂ.ಪೂವಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಚ್ಚಕವಿ ಕೊಡವ ಭಾಷೆಯ ಆದಿಕವಿ, ವರಕವಿ, ವರ್ಷಂಪ್ರತಿ ಸೆ.21ರಂದು ಅವರ ಜನ್ಮದಿನವನ್ನು ಆಚರಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಪ್ರಸ್ತುತ 155ನೇ ಜನ್ಮದಿನವನ್ನು ಆಚರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಜಿಲ್ಲೆಯ ಜನತೆಯ ಮನದಲ್ಲಿ ಉಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಪ್ಪಚ್ಚ ಕವಿಯ ಜನ್ಮಸ್ಥಳ ಕಿರುಂದಾಡು ಗ್ರಾಮದ ಅಪ್ಪನೆರವಂಡ ಐನ್‍ಮನೆಯನ್ನು ಕವಿ ಸ್ಮಾರಕ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು, ಮಡಿಕೇರಿ ಚೌಕಿ ವೃತ್ತಕ್ಕೆ ಹರದಾಸ ಅಪ್ಪಚ್ಚಕವಿ ವೃತ್ತ ಎಂದು ಹೆಸರಿಡಬೇಕು, ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಹರದಾಸ ಅಪ್ಪಚ್ಚಕವಿ ಸ್ಮಾರಕ ಕನ್ನಡ ವಿಭಾಗ ಎಂದು ನಾಮಕರಣ ಮಾಡಬೇಕು, ಕೊಡವ ಎಂ.ಎ ಕೋರ್ಸ್‍ಗೆ ಕವಿಗಳ ವಿಷಯವನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲರಂಡ ವಿಠಲ ನಂಜಪ್ಪ ಮಾತನಾಡಿ, ಅಪ್ಪಚ್ಚಕವಿ ಹೆಸರಿನಲ್ಲಿ ಕಲಾಭವನ ನಿರ್ಮಾಣ ಮಾಡಬೇಕು, ನಾಟಕ ಪ್ರದರ್ಶನಕ್ಕೆ ಯೋಗ್ಯವಾದ ವೇದಿಕೆ ನಿರ್ಮಾಣ ಮಾಡಬೇಕು, ಕಲೆ ಮತ್ತು ಸಾಹಿತ್ಯಕ್ಕೆ ಒತ್ತುನೀಡಿ ನಡೆಯುವ ಕಾರ್ಯಕ್ರಮಗಳಿಗೆ ಈ ವೇದಿಕೆಗಳು ಲಭ್ಯವಾಗುವಂತಿರಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಅಪ್ಪಚ್ಚಕವಿಗಳು ಜಿಲ್ಲೆಯ ಆದಿಕವಿಯಾಗಿದ್ದಾರೆ. ಸಾಹಿತ್ಯ ಮತ್ತು ನಾಟಕವನ್ನು ಬರೆದ ಅವರು ಕೊಡಗಿನ ಸೇಕ್ಸ್‍ಪೀಯರ್ ಆಗಿದ್ದರು. ದೈವತ್ವವನ್ನು ಎತ್ತಿಹಿಡಿದ ಅವರು, ಕೇವಲ ಬರಹಗಾರರು ಮಾತ್ರವಲ್ಲದೇ ನಾಟಕದಲ್ಲೂ ತೊಡಗಿಸಿಕೊಂಡಿದ್ದರು. ಭ್ರಷ್ಟಚಾರವನ್ನು ವಿರೋಧಿಸುತ್ತಿದ್ದ ಅವರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.