ಮಡಿಕೇರಿ ಸೆ.28 : ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ಸಂಭ್ರಮ, ಸಡಗರದಿಂದ ರಾಜ್ಯದಲ್ಲಿ ಮಾದರಿಯಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿgಐ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ.
ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವು ಕೊಡಗು ಜಿಲ್ಲೆಯಲ್ಲಿ ವಿಶಿಷ್ಟವಾದ ಹಬ್ಬವಾಗಿದೆ. ಆ ನಿಟ್ಟಿನಲ್ಲಿ ಉತ್ಸವವಾಗಿ ನಡೆಸುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಹೇಳಿದರು.
ತಲಕಾವೇರಿ ಜಾತ್ರಾ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಪೊಲೀಸ್, ಸಾರಿಗೆ, ಅರಣ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.
ಮಡಿಕೇರಿಯಿಂದ ತಲಕಾವೇರಿಯವರೆಗೆ, ನಾಪೋಕ್ಲುವಿನಿಂದ ಭಾಗಮಂಡಲ ಹಾಗೆಯೇ ಭಾಗಮಂಡಲ-ಕರಿಕೆ ರಸ್ತೆ ಸರಿಪಡಿಸಬೇಕು. ಗಿಡಗಂಟೆಗಳನ್ನು ಕಡಿಯಬೇಕು. ಜೊತೆಗೆ ರಸ್ತೆ ಬದಿ ಬೆಳೆದಿರುವ ಮರದ ಕೊಂಬೆಗಳನ್ನು ಕಡಿಯುವಂತಾಗಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.
ಈ ಬಾರಿ ಪವಿತ್ರ ತೀರ್ಥೋದ್ಭವ ಮಧ್ಯರಾತ್ರಿ ಸಂಭವಿಸುವುದರಿಂದ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು. ವಿದ್ಯುತ್ ಮಾರ್ಗಗಳನ್ನು ಸರಿಪಡಿಸಬೇಕು. ಅಗತ್ಯ ಲೈಟಿಂಗ್ ವ್ಯವಸ್ಥೆಗೆ ಕ್ರಮವಹಿಸಬೇಕು ಎಂದು ಶಾಸಕರು ಹೇಳಿದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರು ಪೂರೈಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜೊತೆಗೆ ಅಗತ್ಯ ಶೌಚಾಲಯ ವ್ಯವಸ್ಥೆ ಮಾಡಬೇಕು. ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಜ್ಞ ವೈದ್ಯರನ್ನು ನಿಯೋಜಿಸುವುದು, ಆಂಬ್ಯುಲೆನ್ಸ್ ಸೇವೆ ಒದಗಿಸುವಂತೆ ಪೊನ್ನಣ್ಣ ಅವರು ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಬೇಕು. ಭಕ್ತಾದಿಗಳಿಗೆ ಕಿರಿಕಿರಿ ಉಂಟಾಗದಂತೆ ಗಮನಹರಿಸಬೇಕು. ಹಾಗೆಯೇ ಹೆಚ್ಚುವರಿ ಬಸ್ ಸೇವೆಯನ್ನು ಕಲ್ಪಿಸಬೇಕು. ಜಾತ್ರಾ ಮಹೋತ್ಸವದಂದು ಭಾಗಮಂಡಲದಿಂದ ತಲಕಾವೇರಿವರೆಗೆ ಎಲ್ಲರಿಗೂ ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡುವಂತೆ ಎ.ಎಸ್.ಪೊನ್ನಣ್ಣ ಅವರು ಹೇಳಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸೂರ್ತಲೆ ಕಾಶಿ ಅವರು ಪುರಾತನ ಕಾಲದಿಂದಲೂ ಇಲ್ಲಿನ ಸ್ಥಳೀಯರು ಕೇಶಮುಂಡನೆ ಮಾಡಿ, ಪಿಂಡ ಪ್ರಧಾನ ಮಾಡಿಕೊಂಡು ಬರುತ್ತಿದ್ದಾರೆ. ಕುಂಕುಮಾರ್ಚನೆ ಮಾಡಿ ಅಗಸ್ತ್ಯ ಮುನಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದ್ದರಿಂದ ತಲಕಾವೇರಿಯ ಕುಂಡಿಕೆ ಬಳಿ ಕುಂಕುಮಾರ್ಚನೆಗೆ ಅವಕಾಶ ಮಾಡಬೇಕು ಎಂದು ಅವರು ಕೋರಿದರು.
ಅಮೆ ಪಾಲಾಕ್ಷ ಅವರು ಮಾತನಾಡಿ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಅವಕಾಶ ಮಾಡಬೇಕು. ಪೂಜೆ ವಿಧಿ ವಿಧಾನಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಸಲಹೆ ನೀಡಿದರು.
ಎಂ.ಬಿ.ದೇವಯ್ಯ ಅವರು ಮಾತನಾಡಿ ತಲಕಾವೇರಿ ಜಾತ್ರಾ ಮಹೋತ್ಸವ ನಂತರ ಅಷ್ಟಮಂಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಪರಿಹರಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಹಾಗೆಯೇ ‘ದುಡಿ’ ನುಡಿಸುವವರಿಗೆ ತಲಕಾವೇರಿಗೆ ತೆರಳಲು ವಾಹನ ಪಾಸ್ಗೆ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಕುದುಕುಳಿ ಭರತ್ ಅವರು ಮಾತನಾಡಿ ತಣ್ಣಿಮಾನಿ-ತಲಕಾವೇರಿ ರಸ್ತೆಯನ್ನು ಸರಿಪಡಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಅವರು ತಿಳಿಸಿದರು.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಅವರು ಮಾತನಾಡಿ ಜಾತ್ರಾ ದಿನದಂದು ಭಾಗಮಂಡಲದಿಂದ ತಲಕಾವೇರಿಯವರೆಗೆ ಖಾಸಗಿ ಬಸ್ಗಳ ಓಡಾಟಕ್ಕೂ ಅವಕಾಶ ಮಾಡಬೇಕು ಎಂದು ಕೋರಿದರು.
ಅಖಿಲ ಕೊಡವ ಸಮಾಜದ ಯೂತ್ವಿಂಗ್ ಅಧ್ಯಕ್ಷರಾದ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರು ಮಾತನಾಡಿ ಕಾವೇರಿ ಮಾತೆ ಕೊಡಗಿಗೆ ಸೀಮಿತವಲ್ಲ. ಇಡೀ ದಕ್ಷಿಣ ರಾಜ್ಯಗಳ ಜೀವನದಿ ಆಗಿದ್ದು, ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ರಾಜ್ಯಕ್ಕೆ ರಜೆ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಕೊಡಗಿನ ಜನರು ಎಲ್ಲೆಡೆ ಇದ್ದು, ತಲಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಆಗಮಿಸುತ್ತಾರೆ. ಆದ್ದರಿಂದ ರಾಜ್ಯ ಮಟ್ಟದಲ್ಲಿ ರಜೆ ಘೋಷಿಸುವಂತಾಗಬೇಕು. ಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಇದರಿಂದ ಕೊಡಗಿನ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಗಮನಹರಿಸುವಂತಾಗಬೇಕು ಎಂದು ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರು ಸಲಹೆ ಮಾಡಿದರು.
ಕರಿಕೆಯ ರಮಾನಾಥ ಅವರು ಮಾತನಾಡಿ ಭಾಗಮಂಡಲ-ತಲಕಾವೇರಿ ಭಾಗದಲ್ಲಿ ಕೃಷಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಪ್ರವಾಸೋದ್ಯಮಕ್ಕೂ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ‘ಗ್ಲಾಸ್ ಬ್ರಿಡ್ಜ್’ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ವಿನಂತಿಸಿದರು.
ಯುಕೋ ಅಧ್ಯಕ್ಷರಾದ ಮಂಜು ಚಿಣ್ಣಪ್ಪ ಅವರು ಮಾತನಾಡಿ ಕುಂಕುಮಾರ್ಚನೆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗದಂತೆ ಎಚ್ಚರವಹಿಸಬೇಕು. ತಲಕಾವೇರಿ ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕು ಎಂದರು.
ತೆನ್ನಿರಾ ಮೈನಾ ಅವರು ಮಾತನಾಡಿ ಮಡಿಕೇರಿಯಿಂದ ಭಾಗಮಂಡಲ ರಸ್ತೆ ಸರಿಪಡಿಸಬೇಕು. ಕಾಮಗಾರಿ ಲೋಪ ಆಗದಂತೆ ಎಚ್ಚರವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಈ ಬಾರಿ ರಾತ್ರಿ ವೇಳೆ ತೀರ್ಥೋದ್ಭವ ಸಂಭವಿಸುವುದರಿಂದ ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗುವುದು ಎಂದು ಹೇಳಿದರು.
ತಣ್ಣಿಮಾನಿ-ತಲಕಾವೇರಿ ರಸ್ತೆ ಕಠಿಣವಾಗಿದೆ. ಕೋರಂಗಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರಿಶೀಲಿಸಲಾಗುವುದು. ಭಾಗಮಂಡಲ-ತಲಕಾವೇರಿ ರಸ್ತೆ ಬದಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.
ಬಿದ್ದಾಟಂಡ ಎಸ್.ತಮ್ಮಯ್ಯ ಅವರು ಮಾತನಾಡಿ ಬೆಂಗಳೂರು, ಮೈಸೂರು, ಮಂಗಳೂರಿನಿಂದ ತೀರ್ಥ ತೆಗೆದುಕೊಂಡು ಹೋಗಲು ಭಕ್ತಾಧಿಗಳು ಆಗಮಿಸಲಿದ್ದಾರೆ. ಇವರ ವಾಹನಕ್ಕೆ ಪಾಸ್ ವ್ಯವಸ್ಥೆ ಮಾಡಬೇಕು. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗ ವತಿಯಿಂದ ಕಳೆದ 25 ವರ್ಷಗಳಿಂದ ಅನ್ನ ಸಂತರ್ಪಣೆ ಏರ್ಪಡಿಸಿಕೊಂಡು ಬರಲಾಗಿದೆ. ಅದನ್ನು ಮುಂದುವರಿಸಲಾಗುವುದು ಎಂದು ಬಿ.ಎಸ್.ತಮ್ಮಯ್ಯ ಅವರು ಹೇಳಿದರು.
ತೀರ್ಥ ತೆಗೆದುಕೊಂಡು ಹೋಗುವ ವಾಹನಗಳಿಗೆ ತೀರ್ಥೋದ್ಭವವಾಗಿ ಒಂದು ಗಂಟೆಯ ನಂತರ ಅವಕಾಶ ಮಾಡಲಾಗುವುದು ಎಂದು ಇನ್ಸ್ಪೆಕ್ಟರ್ ಮೇದಪ್ಪ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ತೀರ್ಥ ತೆಗೆದುಕೊಂಡು ಹೋಗುವ ವಾಹನಗಳಿಗೆ ಅವಕಾಶ ಮಾಡಬೇಕು. ಯಾವುದೇ ರೀತಿ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದು ಸಲಹೆ ಮಾಡಿದರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅನ್ನಸಂತರ್ಪಣೆ ಕಾರ್ಯ ವ್ಯವಸ್ಥಿತವಾಗಿ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಹೆಚ್ಚುವರಿ ಬಸ್ಗಳನ್ನು ಕಲ್ಪಿಸಬೇಕು. ಹಾಗೆಯೇ ಹೆಚ್ಚುವರಿ ಚಾಲಕರನ್ನು ನಿಯೋಜಿಸಬೇಕು ಎಂದರು. ತಜ್ಞ ವೈದ್ಯರನ್ನು ನಿಯೋಜಿಸುವುದರ ಜೊತೆಗೆ ಐಸಿಯು ವ್ಯವಸ್ಥೆ ಕಲ್ಪಿಸುವಂತೆ ಅವರು ಸಲಹೆ ಮಾಡಿದರು.
ಭಾಗಮಂಡಲ ಮೇಲುಸೇತುವೆ ಕಾಮಗಾರಿ ಆರಂಭವಾಗಿದೆ. ತೀರ್ಥೋದ್ಭವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗುವುದು ಎಂದು ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಾರ್ವಜನಿಕರ ಸಲಹೆ, ಅಭಿಪ್ರಾಯದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸ್ಥಳೀಯ ಸಂಸ್ಕøತಿಯನ್ನು ಬಿಂಬಿಸುವ ಗೀತಾಗಾಯನ ಕಾರ್ಯಕ್ರಮ ಆಯೋಜಿಸುವಂತೆ ಶಾಸಕರು ಸಲಹೆ ಮಾಡಿದರು.
ಗ್ರಾ.ಪಂ. ಅಧ್ಯಕ್ಷರಾದ ಕಾಳನ ರವಿ ಅವರು ಮಾತನಾಡಿ ಗ್ರಾ.ಪಂ.ವತಿಯಿಂದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು ಪೂರೈಕೆಗೆ ಕ್ರಮ, ಚರಂಡಿ ಸರಿಪಡಿಸಲಾಗಿದೆ. ಯಾತ್ರಾರ್ಥಿಗಳಿಗೆ ಅನುಕೂಲವಾಗುವ ಕೆಲಸಗಳನ್ನು ನಿರ್ವಹಿಸಲಾಗಿದೆ ಎಂದರು.
ಭಾಗಮಂಡಲ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯರು ವಾಸ್ತವ್ಯ ಹೂಡುವಂತಾಗಬೇಕು. ಜಾತ್ರಾ ಪ್ರಯುಕ್ತ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಪೊನ್ನಣ್ಣ ಅವರು ಈ ಬಾರಿ ತಲಕಾವೇರಿ ಜಾತ್ರೆಗೆ ಹೆಚ್ಚಿನ ಹಣ ಬಿಡುಗಡೆಯಾಗಲಿದ್ದು, ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಿಯಮಾನುಸಾರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದರು.
ಮನು ಮುತ್ತಪ್ಪ ಅವರು ಮಾತನಾಡಿ ತಲಕಾವೇರಿ ಜಾತ್ರಾ ಮಹೋತ್ಸವ ದಿನದಿಂದ ಕಿರು ಸಂಕ್ರಮಣದವರೆಗೆ ಭಾಗಮಂಡಲದಲ್ಲಿ ವಾಹನದ ಶುಲ್ಕ ವಸೂಲಿ ಮಾಡಬಾರದು ಎಂದು ಸಲಹೆ ಮಾಡಿದರು.
ಸುನಿಲ್ ಪತ್ರಾವೋ ಅವರು ಮಾತನಾಡಿ ಭಾಗಮಂಡಲ-ತಲಕಾವೇರಿ ರಸ್ತೆ ಮಾರ್ಗದಲ್ಲಿ ಮರದ ಕೊಂಬೆಗಳನ್ನು ಕಡಿಯುವಂತಾಗಬೇಕು ಎಂದು ಸಲಹೆ ಮಾಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಗ್ರಾ.ಪಂ.ಉಪಾಧ್ಯಕ್ಷರಾದ ಗಂಗಮ್ಮ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಭಾಗಮಂಡಲ ದೇವಾಲಯದ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಡಿವೈಎಸ್ಪಿ ಎಂ.ಜಗದೀಶ್, ವಿವಿಧ ಇಲಾಖೆ ಅಧಿಕಾರಿಗಳು, ಭಕ್ತಾಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಮಾಜದ ಮುಖಂಡರು ಇತರರು ಇದ್ದರು.