ನಾಪೋಕ್ಲು ಸೆ.29 : ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಈದ್ ನಾಪೋಕ್ಲುವಿನ ವಿವಿಧೆಡೆ ಸಂಭ್ರಮದ ಈದ್ ಮಿಲಾದ್ ಆಚರಿಸಲಾಯಿತು.
ನಾಪೋಕ್ಲು, ಕೊಟ್ಟಮುಡಿ, ಹಳೆತಾಲೂಕು, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ಕೂರುಳಿ, ಪಡಿಯಾನಿ, ಬೆಟ್ಟಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಸೀದಿ ಹಾಗೂ ಮದರಸಗಳ ವತಿಯಿಂದ ಆಚರಿಸಲಾಯಿತು.
ಮಿಲಾದ್ ಸಂದೇಶ (ಜಾತ) ಮೆರವಣಿಗೆ ಹಾಗೂ ವಿಶೇಷ ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸುವುದರ ಮೂಲಕ ಪ್ರವಾದಿ ಜನ್ಮದಿನವನ್ನು ಮುಸ್ಲಿಂ ಭಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ನಾಪೋಕ್ಲು ಪಟ್ಟಣದಲ್ಲಿರುವ ಮೊಹಿಯದ್ದೀನ್ ಜುಮ್ಮ ಮಸೀದಿ ಹಾಗೂ ಹಿದಾಯತಿಲ್ ಇಸ್ಲಾಂ ಮಾದರಸ ಆಡಳಿತ ಮಂಡಳಿ ವತಿಯಿಂದ ನಾಪೋಕ್ಲು ಮುಖ್ಯ ರಸ್ತೆ ಹಾಗೂ ಬೀದಿಗಳಲ್ಲಿ ಮಳೆಯನ್ನು ಲೆಕ್ಕಿಸದೆ ಸಂದೇಶ ಜಾಥ ನಡೆಯಿತು.
ನಾಪೋಕ್ಲು ಮೊಹಿಯದ್ದೀನ್ ಜುಮ್ಮ ಮಸೀದಿ ಯಿಂದ ಪ್ರಾರಂಭಗೊಂಡ ಜಾಥಾ ಮುಖ್ಯ ರಸ್ತೆ ಮೂಲಕ ಪುಟಾಣಿ ಮಕ್ಕಳನ್ನು ಒಳಗೊಂಡಂತೆ ಯುವಕರಿಂದ ದಫ್ ಪ್ರದರ್ಶನ ನೀಡಲಾಯಿತು.
ಜನಾಂಗ ಬಾಂಧವರು ಆಕರ್ಷಕ ಸಮವಸ್ತ್ರಗಳನ್ನು ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಪ್ರವಾದಿಯವರ ಶಾಂತಿ, ಸಹೋದರತೆಯ ಸಂದೇಶಗಳನ್ನು ಘೋಷಣೆಗಳ ಮೂಲಕ ಸಾರಿ ಸಮಾಜಕ್ಕೆ ಶಾಂತಿ ಸಂದೇಶವನ್ನು ನೀಡಿದರು. ನಂತರ ಸಂತೆ ಮೈದಾನದಲ್ಲಿ ಜಮಾವಣೆಗೊಂಡ ಬಳಿಕ ಮಕ್ಕಳಿಂದ ದಿನದ ಮಹತ್ವದ ಬಗ್ಗೆ ಭಾಷಣ ಸೇರಿದಂತೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ನೀಡಿ ಶುಭ ಹಾರೈಸಿದರು.
ಬಳಿಕ ಅನ್ನದಾನ ನಡೆಯಿತು. ಈ ಸಂದರ್ಭ ಮಸೀದಿಯ ಆಡಳಿತ ವರ್ಗ ಹಾಗೂ ಸದಸ್ಯರು, ಮದ್ರಸದ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಭಾಂಧವರು ಹಾಜರಿದ್ದರು. ಹಬ್ಬದ ಪ್ರಯುಕ್ತ ಮಸೀದಿಗಳನ್ನು ವಿಶೇಷ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.
ವರದಿ : ದುಗ್ಗಳ ಸದಾನಂದ