ಕುಶಾಲನಗರ, ಸೆ. 29: ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ( ಡಿ.ಎಸ್.ಇ.ಆರ್.ಟಿ.) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಮಾನವಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಕೇಂದ್ರ ವಿಷಯದಡಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಲ್ಲಿ ಮೈಸೂರು ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು.
ಮೈಸೂರಿನಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ನಾಟಕ ಸ್ಪರ್ಧೆಗೆ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ” ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಂತರ್ಜಾಲ ಮತ್ತು ಕೃತಕ ಬುದ್ದಿಮತ್ತೆ” ಕುರಿತು
ಉತ್ತಮ ನಾಟಕ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ಮೈಸೂರಿನ ನಂಜುಮಳಿಗೆಯ ಗೋಪಾಲಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ತಂಡವು ರಾಜ್ಯಮಟ್ಟದ ನಾಟಕ ಸ್ಪರ್ಧೆಗೆ ಆಯ್ಕೆಗೊಂಡಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಡಾ.ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ತಂಡವು ದ್ವಿತೀಯ ಬಹುಮಾನ ಹಾಗೂ ಮಡಿಕೇರಿ ನಗರದ ಸಂತ ಮೈಕಲರ ಪ್ರೌಢಶಾಲೆಯ ತಂಡವು ತೃತೀಯ ಬಹುಮಾನ ಗಳಿಸಿತು.
ಉತ್ತಮ ಪ್ರಶಸ್ತಿ ಪಡೆದವರ ವಿವರ :: ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಾರ್ಗದರ್ಶಿ ಶಿಕ್ಷಕ ನಾಗರಾಜು
ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ಮಡಿಕೇರಿ ಸಂತ ಮೈಕಲ್ಲರ ಶಾಲೆಯ ತಂಡದ ಮಂತ್ರವಾದಿ ಪಾತ್ರ ನಿರ್ವಹಿಸಿದ ವಿದ್ಯಾರ್ಥಿ ಅಲೆನ್ ಥಾಮಸ್ ಉತ್ತಮ ನಟ ಪ್ರಶಸ್ತಿ ಪಡೆದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ರಾಗಿ ಮುದ್ದನಹಳ್ಳಿ ಸಹಶಿಕ್ಷಕಿ ಕೆ.
ಕುಸುಮಾ ಉತ್ತಮ ನಾಟಕ ರಚನಾಕಾರರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಆದರ್ಶ ಶಾಲೆಯ ಎಲ್. ಸಿಂಚನ ಉತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾಟಕ ಸ್ಪರ್ಧೆಯ ನೋಡಲ್ ಅಧಿಕಾರಿ ಕೆ.ಜಿ.ನೀಲಕಂಠಪ್ಪ ಮಾತನಾಡಿ, “ಮಾನವಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಕೇಂದ್ರ ವಿಷಯದಡಿ ಐದು ವಿಷಯಗಳ ಕುರಿತು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದ್ದಾರೆ ಎಂದರು.
ಡಯಟ್ ಸಂಸ್ಥೆಯ ಪೂರ್ವ ಸೇವಾ ತರಬೇತಿ ವಿಭಾಗದ ಮುಖ್ಯಸ್ಥ ಎಂ.ಕೃಷ್ಣಪ್ಪ, ಸಂಸ್ಥೆಯ
ಉಪನ್ಯಾಸಕರಾದ ವಿ.ವಿಜಯ್, ಎಂ.ಎಸ್. ಧನಪಾಲ್ ಹಾಜರಿದ್ದರು.