ವಿರಾಜಪೇಟೆ ಸೆ.29 : ವಿರಾಜಪೇಟೆ ಐತಿಹಾಸಿಕ ಶ್ರೀ ಗೌರಿ ಗಣೇಶ ವಿಸರ್ಜನೋತ್ಸವು ವಿದ್ಯುತ್ ಅಲಂಕೃತ ಮಂಟಪದ ಶೋಭಾಯಾತ್ರೆಯೊಂದಿಗೆ ಸಂಭ್ರಮದಿಂದ ನಡೆಯಿತು.
22 ಮಂಟಪಗಳು ಗೌರಿ ಗಣೇಶ ಮೂರ್ತಿಗಳನ್ನು ಹೊತ್ತ ಶೋಭಾಯಾತ್ರೆ ನಗರದ ಮುಖ್ಯ ಬೀದಿಯಲ್ಲಿ ಮಳೆಯ ನಡುವೆಯೂ ಮೆರವಣಿಗೆ ನಡೆಸಿ ಪವಿತ್ರ ಗೌರಿ ಕೆರೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ವಿಸರ್ಜಿಸಲಾಯಿತು.
ಸೆ.19ರಂದು ನಗರದ 22 ಸಮಿತಿಗಳ ಮೂಲಕ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನಿಗೆ 10 ದಿನಗಳ ಕಾಲ ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ ಸಲ್ಲಿಸಿ ವಿದ್ಯುತ್ ದೀಪಾಲಂಕೃತ ಹೂವಿನ ಭವ್ಯ ಮಂಟಪದಲ್ಲಿ ವಿಶೇಷ ವಾಧ್ಯಗೋಷ್ಠಿಯೋಂದಿಗೆ ಮಂಟಪಗಳು ಮೆರವಣಿಗೆಯಲ್ಲಿ ಸಾಗಿ ಬಂದವು.
ನಗರದ ಶ್ರೀ ಗಣಪತಿ ದೇವಸ್ಥಾನ ಗಡಿಯಾರ ಕಂಬದ ಬಳಿ, ಜೈನರ ಬೀದಿ ಶ್ರೀ ಬಸವೇಶ್ವರ ದೇವಸ್ಥಾನ, ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ, ವಿನಾಯಕ ಯುವಕ ಭಕ್ತ ಮಂಡಳಿ ಅಂಗಾಳ ಪರಮೇಶ್ವರಿ ದೇವಸ್ಥಾನ, ವಿಜಯ ವಿನಾಯಕ ಉತ್ಸವ ಸಮಿತಿ ದಕ್ಕನಿಮೊಹಲ್ಲಾ, ಕಾವೇರಿ ಗಣೇಶ ಉತ್ಸವ ಸಮಿತಿ ಮೂರ್ನಾಡು ರಸ್ತೆ, ನೇತಾಜಿ ಉತ್ಸವ ಸಮಿತಿ ನೆಹರು ನಗರ, ಗಣಪತಿ ಸೇವಾ ಸಂಘ ಗಣಪತಿ ಬೀದಿ, ವಿನಾಯಕ ಸೇವಾ ಸಮಿತಿ ಪಂಜರುಪೇಟೆ, ಜಲದರ್ಶಿನಿ ವಿನಾಯಕ ಸೇವಾ ಸಮಿತಿ ಆಂಜನೇಯ ದೇವಸ್ಥಾನ ಚಿಕ್ಕಪೇಟೆ, ವಿಘ್ನೇಶ್ವರ ಉತ್ಸವ ಸಮಿತಿ ಕುಕ್ಲೂರು, ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ, ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಗಣಪತಿ ಸೇವಾ ಸಮಿತಿ ಗಾಂಧಿನಗರ, ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ಹರಿಕೇರಿ, ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಕೆ.ಬೋಯಿಕೇರಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಗೌರಿಕೆರೆ ಗಣಪತಿ ಸೇವಾ ಸಮಿತಿ ವಿರಾಜಪೇಟೆ, ವಿಘ್ನೇಶ್ವರ ಉತ್ಸವ ಸೇವಾ ಸಮಿತಿ ಪಟ್ಟಣ ಪಂಚಾಯಿತಿ, ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ವಿನಾಯಕ ಯುವ ಸಮಿತಿ ಶಿವಕೇರಿ, ಶ್ರೀ ಬಾಲಂಜನೇಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯಸ್ವಾಮಿ ರಸ್ತೆ, ಒಟ್ಟು 22 ವಿದ್ಯುತ್ ಅಲಾಂಕೃತ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಸಾಂಪ್ರದಾಯಿಕ ಚಾಲನೆ :: ನಗರದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ 10001 ಈಡುಗಾಯಿ ಅರ್ಪಿಸಿ ಪುಷ್ಪಾಲಂಕೃತ ವಾಹನದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಿಡಿಮದ್ದು ಸಿಡಿಸಿ ಇತರ ಸಮಿತಿಗಳು ಮೂರ್ತಿಯನ್ನು ಮಂಟಪಕ್ಕೆ ಸ್ಥಳಾಂತರಿಸಿ ಮೆರವಣಿಗೆಗೆ ಸಜ್ಜಾಗುವಂತೆ ಸಂದೇಶ ನೀಡಲಾಯಿತು.
ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿ ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಪ್ರದೇಶ ಗೌರಿದೇವಿಗೆ ಪೂಜೆ ಸಲ್ಲಿಸಿತು. ಇದರ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆಯಿತು. ಎಲ್ಲಾ ಮಂಟಪಗಳಲ್ಲಿ ಗಣೇಶ ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಿದರೆ ಶ್ರೀ ಬಸವೇಶ್ವರ ದೇವಾಲಯದ ಮಂಟಪದಲ್ಲಿ ಮಾತ್ರ ಐತಿಹಾಸಿಕ ಪ್ರತೀತಿ ಇರುವ ಹಿನ್ನೆಲೆ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಕುಳ್ಳಿರಿಸಲಾಗಿತ್ತು.
ಗೌರಿ ಗಣೇಶ ವಿಸರ್ಜನೆಗಾಗಿ ಪುರಸಭೆಯಿಂದ ಪವಿತ್ರ ಗೌರಿಕೆರೆಯನ್ನು ಸ್ವಚ್ಚತೆ ಗೊಳಿಸಿ ದೀಪಾಲಂಕಾರ ಹಾಗೂ ತೆಪ್ಪದ ವ್ಯವಸ್ಥೆ ಮಾಡಲಾಗಿತ್ತು. ಗೌರಿ ಗಣೇಶ ವಿಸರ್ಜನೋತ್ಸವ ಮತ್ತು ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿಂದ ಪೊಲೀಸ್ ಇಲಾಖೆ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.
ಗಣೇಶೋತ್ವದ ಅಂಗವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಲಾಗಿತ್ತು ಹಾಗೂ ತಾ.27 ರಂದು ರಾತ್ರಿಯಿಂದ ಮಧ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಪುರಸಭೆಯಿಂದ ಸುಗಮ ಸಂಚಾರಕ್ಕೆ ರಸ್ತೆಯ ಗುಂಡಿಗಳನ್ನು ಮುಚ್ಚಿ ರಸ್ತೆ ಬದಿಯಲ್ಲಿ ಸ್ವಚ್ಚಗೊಳಿಸಲಾಗಿತ್ತು. ಸೆಸ್ಕಾಂ ಇಲಾಖೆಯಿಂದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ತಂತಿಗಳ ಬಗ್ಗೆ ನಿಗಾವಹಿಸಿದ್ದರು.










