ಗೋಣಿಕೊಪ್ಪಲು ಸೆ.29 : ಕೊಡಗು ಜಿಲ್ಲೆ ಸೇರಿದಂತೆ ರಾಜ್ಯವೇ ಬರದಿಂದ ತತ್ತರಿಸಿದೆ, ಇಂತಹ ಸಂದರ್ಭದಲ್ಲಿ ಕಾವೇರಿ ನದಿಯ ನೀರು ತಮಿಳುನಾಡಿಗೆ ಬಿಡಲು ಅದೇಶ ಮಾಡಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲೋಪ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮಾನವ ಸರಪಳಿ ನಿರ್ಮಿಸಿ ಗೋಣಿಕೊಪ್ಪಲಿನಲ್ಲಿ ಪ್ರತಿಭಟನೆ ನಡೆಸಿತು.
ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ರೈತ ಸಂಘ ತನ್ನ ಬೆಂಬಲ ಸೂಚಿಸಿತು.
ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹುಟ್ಟಿದ ಕಾವೇರಿ ನದಿಯು ರಾಜ್ಯದ ಜನತೆಗೆ ನೀರು ಉಣಿಸುತ್ತಿದೆ. ಪರಿಸರ ಅಸಮತೋಲನದಿಂದ ನಿರ್ದಿಷ್ಟ ಪ್ರಮಾಣದಲ್ಲಿ ಮಳೆಯಾಗದೆ ಬರದ ಛಾಯೆ ಕಾಣಿಸಿಕೊಂಡಿದೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರು, ತಮಿಳು ನಾಡಿಗೆ ನೀರು ಹರಿಯಬಿಟ್ಟಿದ್ದಾರೆ. ಕಾವೇರಿ ಪ್ರಾಧಿಕಾರದ ಅಧಿಕಾರಿಗಳು ರಾಜ್ಯದ ಎಲ್ಲಾ ಭಾಗಗಳಿಗೆ ಭೇಟಿ ನೀಡಿ ಅವಲೋಕನ ಮಾಡಬೇಕಿತ್ತು. ಅದರೆ ಕಛೇರಿಯಲ್ಲಿ ಕುಳಿತು ತಯಾರು ಮಾಡಿದ ವರದಿಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ಅಕಾಲಿಕ ಮಳೆಯ ಪರಿಣಾಮ ಕೃಷಿಕರು ಬೀದಿಗೆ ಬರುವ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗಬೇಕು ಎಂದು ಒತ್ತಾಯಿಸಿದರು.
ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ ಕಾವೇರಿ ಪ್ರಾಧಿಕಾರದ ವರದಿ ಪುನರ್ ಪರಿಶೀಲನೆ ಮಾಡಿ ರಾಜ್ಯದ ಜನತೆಗೆ ಅನ್ಯಾಯವಾಗದ ರೀತಿಯಲ್ಲಿ ವರದಿ ನೀಡಬೇಕು ಎಂದು ಆಗ್ರಹಿಸಿದರು.
ವಲಯ ಘಟಕಗಳ ಅಧ್ಯಕ್ಷರುಗಳಾದ ಚೆಪ್ಪುಡಿರ ಕಾರ್ಯಪ್ಪ, ಮಂಡೇಪಂಡ ಪ್ರವೀಣ್ ಬೋಪಯ್ಯ, ತಿತಿರಮಾಡ ರಾಜ, ಚೆಟ್ಟಂಗಡ ಕಂಭ ಕಾರ್ಯಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








