ಮಡಿಕೇರಿ ಸೆ.30 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಕುರಿತು ಕೊಡವ ಜನಜಾಗೃತಿ ಮೂಡಿಸುತ್ತಾ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ 5 ಹಂತಗಳ ಪಾದಯಾತ್ರೆಯಲ್ಲಿ 2ನೇ ಹಂತದ ಪಾದಯಾತ್ರೆ ವಿರಾಜಪೇಟೆ ತಾಲ್ಲೂಕಿನ “ಚೆಂಬೆಬೆಳಿಯೂರಿನ” ಎಡೆನಾಲ್‍ನಾಡ್ ಮಂದ್‍ನಲ್ಲಿ ಮುಕ್ತಾಯಗೊಂಡಿತು.
ಮೂರನೇ ಹಂತದ ಪಾದಯಾತ್ರೆ ಅ.7 ರಂದು ಬೆಳಗ್ಗೆ 10 ಗಂಟೆಗೆ ಕಂಗಳತ್ತನಾಡ್ (ಗೊಣಿಕೊಪ್ಪ-ಮಾಯಮುಡಿ)ನಿಂದ ಆರಂಭಗೊಳ್ಳಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
“ಚೆಂಬೆಬೆಳಿಯೂರಿನ” ಎಡೆನಾಲ್‍ನಾಡ್ ಮಂದ್ ನಲ್ಲಿ ಕೊಡವ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಿಎನ್‍ಸಿ ಸಂಘಟನೆ ಅತ್ಯಂತ ತಾಳ್ಮೆಯಿಂದ ಸುದೀರ್ಘ ಹೋರಾಟ ನಡೆಸುವ ಮೂಲಕ ಕೊಡವರಿಗೆ ಸಾಂವಿಧಾನಿಕವಾಗಿ ದೊರಕಬೇಕಾದ ಹಕ್ಕುಗಳ ಪರ ಪ್ರತಿಪಾದಿಸುತ್ತಾ ಬಂದಿದೆ ಎಂದರು.
ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ನ್ಯಾಯಯುತವಾಗಿ ಸಾಂವಿಧಾನಿಕ ಭದ್ರತೆ ಸಿಗುವ ಅಗತ್ಯವಿದೆ. ನಮ್ಮನ್ನು ಆಳುತ್ತಿರುವವರು ಈ ಸಣ್ಣ ಜನಾಂಗಕ್ಕೆ ರಕ್ಷಣೆ ನೀಡದಿದ್ದಲ್ಲಿ ಒಂದು ವಿಶಿಷ್ಟ ಸಂತತಿಯೇ ಅಳಿದು ಹೋಗುವ ಆತಂಕವಿದೆ. ಸಿಎನ್‍ಸಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಬೇರೆಯವರ ಹಕ್ಕುಗಳನ್ನು ಕಸಿಯುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ, ನಮ್ಮ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಇದರ ಭಾಗವಾಗಿ ಐದು ಹಂತಗಳಲ್ಲಿ ಜಿಲ್ಲೆಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಪಾದಯಾತ್ರೆ ಹೆಚ್ಚು ಪರಿಣಾಮ ಬೀರಿದ್ದು, ಎರಡು ಹಂತಗಳನ್ನು ಈಗಾಗಲೇ ಮುಗಿಸಿದ್ದೇವೆ. ಇನ್ನು ಉಳಿದಿರುವ ಮೂರು ಹಂತಗಳಲ್ಲಿ ಎಲ್ಲರನ್ನೂ ಭೇಟಿಯಾಗಿ ಕೊಡವ ಲ್ಯಾಂಡ್ ಪರ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ನಾಚಪ್ಪ ಹೇಳಿದರು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಈ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಆದ್ದರಿಂದ ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು.
ಕೊಡವ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು. ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು. ನಮ್ಮ ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು ಸೇರಿದಂತೆ ಒಟ್ಟು 9 ಬೇಡಿಕೆಗಳನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.
ಕೋಲುವಂಡ ಪ್ರತಿಮಾ ಹರೀಶ್, ಪೋರುಕೊಂಡ ಪ್ರಕೃತಿ ಗಣಪತಿ, ಮಂಡೇಪಂಡ ಪ್ರಮೀಳ ಗಣಪತಿ, ಮಂಡೇಪಂಡ ಶಾಂತಿ ಬೋಪಯ್ಯ, ಚೇಂದಂಡ ಲಿಲ್ಲಿ ಪೂವಯ್ಯ, ಎನ್.ಎಂ.ಲೀಲಾವತಿ, ಮಂಡೇಪಂಡ ಸುಮಿತ್ರ ಪಾರ್ವತಿ, ಕೋಳೇರ ಟೀನ ರನ್ನು, ಚೇಂದಂಡ ಸಬಿತಾ ಕಾರ್ಯಪ್ಪ, ಕುಂದೀರ ಕಮಲ, ಅವರೆಮಾಡಂಡ ಜಮುನಾ ಕುಟ್ಟಪ್ಪ, ಕೋಲುವಂಡ ಶರಿನ್ ಬೆಳ್ಯಪ್ಪ, ಮಂಡೇಪಂಡ ಶಾರದ, ಪೋರುಕೊಂಡ ಮೀನಾ, ಎಂ.ಎಸ್.ಮಲ್ಲಿಗೆ ಸೋಮಯ್ಯ, ಎಂ.ಪಿ.ಶ್ರುತಿ ಪೂವಮ್ಮ, ಚೆಂಬಂಡ ಮೀನಾ ಮಾದಪ್ಪ, ಚೆಂಬಂಡ ಅಕ್ಕಚ್ಚಿ ಮುತ್ತಪ್ಪ, ಚೆಂಬಂಡ ಕೌಶಿ ಜಯರಾಮ್, ಕೋಲುವಂಡ ರಾಜಾರಾಂ, ಕೋಲುವಂಡ ಕಾರ್ಯಪ್ಪ, ಅಜ್ಜಿನಿಕಂಡ ಮೊಣ್ಣಯ್ಯ, ಚರಿಮಂಡ ಮುತ್ತಪ್ಪ, ಚಂಬಂಡ ಜನತ್ ಕುಮಾರ್, ಸೋಮೆಯಂಡ ಗಗನ್ ಮುತ್ತಣ್ಣ, ಸೋಮೆಯಂಡ ಬೋಸ್ ಬೊಳ್ಳಿಯಪ್ಪ, ಚರಿಮಂಡ ಬಾನು ಬೋಪಣ್ಣ, ಚೊಟ್ಟೆಯಂಡ ಉದಯ, ಚೇಂದಂಡ ಮಾದಪ್ಪ, ಪೊರ್ಕೊಂಡ ಬನ್ಸಿ ಪೂಣಚ್ಚ, ಚೇಂದಂಡ ಉತ್ತಪ್ಪ, ಮಂಡೇಪಂಡ ಗಣೇಶ್, ಚೇಂದಂಡ ಲಾಲ ಪೊನ್ನಪ್ಪ, ಮಂಡೇಪಂಡ ರವಿ, ಕೋಲುವಂಡ ಅನೂಪ್ ಬೊಳ್ಳಿಯಪ್ಪ, ಚಂಬಂಡ ರಂಜು ಭೀಮಯ್ಯ, ಮಂಡೇಪಂಡ ಬೋಪಯ್ಯ, ಚಂಬಂಡ ಆರ್ಯನ್ ಅಯ್ಯಪ್ಪ, ಚರಿಮಂಡ ಜೀವನ್, ಮಂಡೇಪಂಡ ರಿಶು ಕಾರ್ಯಪ್ಪ, ಪೋರುಕೊಂಡ ನಾಚಪ್ಪ, ಚೆಂಬಂಡ ಬೋಪಣ್ಣ, ಚೇಂದಂಡ ಬಿದ್ದಪ್ಪ, ಚರಿಮಂಡ ಪೂಣಚ್ಚ, ಮಂಡೇಪಂಡ ನಿರನ್ ಮುತ್ತಪ್ಪ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಗಾಳಿಯಲ್ಲಿ ಗುಂಡುಹಾರಿಸಿ ಸಭೆಯನ್ನು ಆರಂಭಿಸಲಾಯಿತು.
::: 3ನೇ ಹಂತದ ಪಾದಯಾತ್ರೆ :::
ಅ.7 ರಂದು ಬೆಳಗ್ಗೆ 10 ಗಂಟೆಗೆ ಕಂಗಳತ್ತನಾಡ್ (ಗೊಣಿಕೊಪ್ಪ-ಮಾಯಮುಡಿ) 3.00 ಗಂಟೆಗೆ ಅರ್ಕೇರಿನಾಡ್ (ಬಾಳೆಲೆ) (ಪೊನ್ನಂಪೇಟೆ ತಾಲೂಕು), ಅ.8 ರಂದು ಬೆಳಗ್ಗೆ 10 ಗಂಟೆಗೆ ಕಿರ್ನಾಲ್‍ನಾಡ್ (ಕಿರ್ಗೂರ್-ಬೆಸಗೂರ್), 3 ಗಂಟೆಗೆ ಪತ್ತ್ ಕಟ್‍ನಾಡ್ (ಬೆಕ್ಕೆಸೆಡ್ಲೂರ್-ಕಾನೂರ್) (ಪೊನ್ನಂಪೇಟೆ ತಾಲೂಕು), ಅ.9 ರಂದು ಬೆಳಗ್ಗೆ 10 ಗಂಟೆಗೆ ತೊಡನಾಡ್ (ಕುಮಟೂರ್-ಶ್ರೀಮಂಗಲ), 2:30 ಗಂಟೆಗೆ, ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು), ಅ.10 ರಂದು ಬೆಳಗ್ಗೆ 10 ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್‍ಗಳಲ್ಲಿ ಸಭೆ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲ್ಲೂಕು), ಅ.11 ರಂದು ಬೆಳಗ್ಗೆ 10 ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), 2.30 ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) (ಪೊನ್ನಂಪೇಟೆ ತಾಲೂಕು) ನಲ್ಲಿ ನಡೆಯಲಿದೆ ಎಂದು ನಾಚಪ್ಪ ಹೇಳಿದರು.








