ಮಡಿಕೇರಿ ಸೆ.30 : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಘೋಷಿಸಿದ್ದ 6ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೋಳಿಸಬೇಕೆಂದು ಒತ್ತಾಯಿಸಿ ಅ.7 ರಂದು ರಾಜ್ಯವ್ಯಾಪಿ ಜನಾಗ್ರಹ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದು, ತಮ್ಮ ಐದು ಗ್ಯಾರಂಟಿಗಳನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಅಸಂಘಟಿತ ಕಾರ್ಮಿಕರಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ.ಗಳು, ಸಹಾಯಕಿಯರಿಗೆ 10,000 ರೂ.ಗಳ ಗೌರವ ಧನ ಹೆಚ್ಚಿಸುವ ಕುರಿತು ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 8 ಸಾವಿರ ರೂ.ಗಳು, ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 6,000ರೂ.ಗಳ ಗೌರವ ಧನ ಹೆಚ್ಚಿಸುವ ಕುರಿತು ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿತ್ತು. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ ವತಿಯಿಂದ ಅ.7 ರಂದು ರಾಜ್ಯವ್ಯಾಪಿ ಜನಾಗ್ರಹ ಚಳುವಳಿ ನಡೆಯಲಿದ್ದು, ಅದರ ಭಾಗವಾಗಿ ಮಡಿಕೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಮೂಲಕ ಸಾಗಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದೆಂದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಮಾತನಾಡಿ, ಕೊಡಗಿನ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ದಲಿತರಿಗೆ ನಿವೇಶನ ಹಂಚಬೇಕು, ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಶಾಸ್ವತವಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ಮರಳಿನ ಸಮಸ್ಯೆಯನ್ನು ಪರಿಹರಿಸಬೇಕು, ಕೊಡಗಿನ ಕಟ್ಟಡ ಕಾರ್ಮಿಕರನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಳ್ಳಲು ಅನುಮತಿ ನೀಡಬೇಕು, ಕಟ್ಟಡ ಹಾಗೂ ಇತರೆ ಕಾರ್ಮಿಕ ವರ್ಗದ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್‍ಶಿಪ್ ಪಡೆಯಲು ಅವಕಾಶ ನೀಡಬೇಕು, ಕೊಡಗಿನ ಡಯಾಲಿಸಿಸ್‍ಗಾಗಿ ಕೇವಲ 20 ಹಾಸಿಗೆಗಳಿದ್ದು, ಅದನ್ನು 30ಕ್ಕೆ ಏರಿಕೆ ಮಾಡಬೇಕು, ಡಯಾಲಿಸಿಸ್ ನೌಕರರಿಗೆ ಸೌಲಭ್ಯಗಳನ್ನು ಕಲ್ಪಿಸಿ, ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಕೊಡಗಿನ ಆಸ್ಪತ್ರೆಗಳಲ್ಲಿ ಕಿಡ್ನಿ, ಹೃದಯ ಸಂಬಂಧಿ ವೈಫಲ್ಯದಿಂದ ಸಾವನ್ನಪ್ಪುವವರ ಸಂಖ್ಯೆ ಅಧಿಕವಿದ್ದು, ತಕ್ಷಣವೇ ನುರಿತ ವೈದ್ಯರನ್ನು ನೇಮಕ ಮಾಡಬೇಕು, ಕೃಷಿ ಕಾಯಿದೆ, ಎಪಿಎಂಸಿ ಕಾಯಿದೆಗಳನ್ನು ರದ್ದುಗೊಳಿಸಬೇಕು, ರೈತರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು, ಫ್ಯಾಕ್ಟರಿ ಕಾಯಿದೆಗೆ ತಂದಿದ್ದ ಕೆಸಲದ ಅವಧಿಯನ್ನು ಹಿಂದಿನಂತೆ 8 ಗಂಟೆಗೆ ಮಿತಗೊಳಿಸವೇಕು, ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸುವ ಕಾನೂನು ತಿದ್ದುಪಡಿಯನ್ನು ಹಿಂಪಡೆಯಬೇಕು, ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕೆ ರೂ.5 ಲಕ್ಷ ಸಹಾಯಧನ ನೀಡಬೇಕು, ಅತಿಥಿ ಶಿಕ್ಷಕರು ಮತ್ತು ಉಪಾನ್ಯಾಸಕರನ್ನು ಖಾಯಂ ಗೊಳಿಸಬೇಕು ಸೂಕ್ತ ಯೋಜನೆ ರೂಪಿಸಬೇಕು, ವರ್ಷಕ್ಕೆ 2500 ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಉನ್ನತೀಕರಿಸಬೇಕು, ಖಾಲಿ ಇರುವ ಶಿಕ್ಷಕರ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು, ರಾಜ್ಯದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ನ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಎಸ್.ಹೆಚ್.ಶಬಾನ ಉಪಸ್ಥಿತರಿದ್ದರು.









