ಮಡಿಕೇರಿ ಸೆ.30 : ಕೊಡಗಿನ ಕೊಡವರಿಗೆ ಈ ಹಿಂದಿನಿಂದಲು ಲಭ್ಯವಿದ್ದ ‘ಕೋವಿ ಹಕ್ಕಿನ ವಿನಾಯಿತಿ’ಗೆ 2019ರಲ್ಲಿ ಅಕ್ಟೋಬರ್ 29 ರಂದು ಕೇಂದ್ರದ ಗೃಹ ಸಚಿವಾಲಯ ಷರತ್ತುಗಳನ್ನು ಅಳವಡಿಸುವ ಹಂತದಲ್ಲಿ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಅವರು ಎಲ್ಲಿದ್ದರು ಎಂದು ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಕೊಡವರಿಗೆ ಬ್ರಿಟಿಷರ ಅವಧಿಯಿಂದಲೆ ಲಭ್ಯವಿದ್ದ ಕೋವಿ ವಿನಾಯಿಸಿ ಹಕ್ಕನ್ನು 1965 ರಿಂದ ಸ್ಥಿರೀಕರಿಸಿ ಮುಂದುವರೆಸಲಾಗಿದೆ. ಈ ಹಕ್ಕಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ಪ್ರಶ್ನಿಸಿದ ಹಿನ್ನೆಲೆ, ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟನೆ ನೀಡಲು ಸೂಚನೆಗಳನ್ನು ನೀಡಿತ್ತು.
ಈ ಹಿನ್ನೆಲೆ ಕೇಂದ್ರದ ಗೃಹ ಸಚಿವಾಲಯ ಕೊಡಗಿನಲ್ಲಿ ವಿಶೇಷ ಕೋವಿ ವಿನಾಯಿತಿ ಹಕ್ಕನ್ನು ಮುಂದುವರಿಸುವ ಹಂತದಲ್ಲಿ, ಈ ಹಕ್ಕನ್ನು ‘2029 ರ ಅಕ್ಟೋಬರ್ 29’ರವರೆಗೆ ಎಂದು ಷರತ್ತನ್ನು ಹಾಕಿ ಮುಂದುವರಿಸಿದೆ. ಈ ಹಂತದಲ್ಲಿ ಕೊಡಗಿನ ಜನರು ಮತ್ತು ಕೋವಿ ನಡುವಿನ ಸಾಂಸ್ಕೃತಿಕ ಸಂಬಂಧ, ಮಹತ್ವಗಳನ್ನು ಸಂಸತ್‍ನಲ್ಲಿ ತಿಳಿಸಬೇಕಿದ್ದ ಪ್ರತಾಪ ಸಿಂಹ ಅವರು ಆ ಸಂದರ್ಭ ಏನು ಮಾಡುತ್ತಿದ್ದರೆಂದು ಪ್ರಶ್ನಿಸಿದರು.
::: ಬಹಿರಂಗ ಚರ್ಚೆಗೆ ಬರಲಿ :::
ಕೊಡಗು-ಮೈಸೂರು ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿರುವ ಪ್ರತಾಪ ಸಿಂಹ ಅವರು ತಮ್ಮ ಅವಧಿಯಲ್ಲಿ ಕೊಡಗಿನ ಮೂಲಭೂತ ವಿಷಯಗಳ ಬಗ್ಗೆ ಕಾಳಜಿ ತೋರಿಲ್ಲ. ಇದನ್ನು ಮರೆ ಮಾಚುವ ಸಲುವಾಗಿ ಇದೀಗ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇದನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ. ಅಗತ್ಯ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಸಂಕೇತ್ ಪೂವಯ್ಯ ಆಹ್ವಾನ ನೀಡಿದರು.
ಕಸ್ತೂರಿ ರಂಗನ್ ವರದಿಯಿಂದ ಕೊಡಗಿಗೆ ಯಾವುದೇ ತೊಂದರೆಯಾಗದಂತೆ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊರುತ್ತೇನೆ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಅಗತ್ಯ ಸ್ಪಂದನ ನೀಡುವುದಾಗಿ ಈ ಹಿಂದೆ ಹೇಳಿಕೊಂಡ ಸಂಸದ ಪ್ರತಾಪ ಸಿಂಹ ಏನು ಮಾಡಿದ್ದಾರೆಂದು ಪ್ರಶ್ನಿಸಿದ ಅವರು, 2014 ರಲ್ಲೆ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದ ಇವರಿಗೆ ಅದನ್ನು ಮಾಡಲು ಸಾಧ್ಯವಾಗಿದೆಯೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಕೋವಿ ಹಕ್ಕು, ಕಾಫಿ ಬೆಳೆಗಾರರ ಸಂಕಷ್ಟಗಳು ಸೇರಿದಂತೆ ಕೊಡಗಿನ ಮೂಲಭೂತ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲೆ ನಿಮ್ಮದೇ ಸರ್ಕಾರ ಇರುವ ಹಂತದಲ್ಲು ಸಂಸದರಿಗೆ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಇದೀಗ ತಮ್ಮ ಲೋಪ ಮುಚ್ಚಿಕೊಳ್ಳಲು, ಶಾಸಕ ಪೊನ್ನಣ್ಣ ಅವರ ಪಾರದರ್ಶಕ, ಪ್ರಾಮಾಣಿಕ ಆಡಳಿತ ವೈಖರಿ ಸಹಿಸದೆ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆಯೆಂದು ಆರೋಪಿಸಿದರು.
::: ನಿಗಮಕ್ಕೆ ಬಿಡಿಗಾಸು ಬಂದಿಲ್ಲ ::: ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು, ಯಾವು ಯಾವುದೋ ಕೋಟಿಗಟ್ಟಲೆ ಅನುದಾನವನ್ನು ನಿಗಮಕ್ಕೆ ನೀಡಿದ್ದೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೊಡವ ಅಭಿವೃದ್ಧಿ ನಿಗಮಕ್ಕು ಆ ಅನುದಾನಗಳಿಗು ಯಾವುದೇ ಸಂಬಂಧವಿಲ್ಲ. ನಿಗಮಕ್ಕೆ ಬಿಡಿಗಾಸು ಬಂದಿಲ್ಲವೆಂದು ಸಂಕೇತ್ ಪೂವಯ್ಯ ಸ್ಪಷ್ಟಪಡಿಸಿದರು.
ಪ್ರಸ್ತುತ ಉದ್ಭವಿಸಿರುವ ಕಾವೇರಿ ನೀರಿನ ಸಮಸ್ಯೆಯ ಬಗ್ಗೆ ಕೊಡಗು ಮೈಸೂರು ಸಂಸದರು ಸೇರಿದಂತೆ ರಾಜ್ಯದ 25 ಸಂಸದರ ನಿಲುವೇನು ಎಂದು ಸಂಕೇತ್ ಪೂವಯ್ಯ ಪ್ರಶ್ನಿಸಿ, ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ ವೈಜ್ಞಾನಿಕ ಚಿಂತನೆಗಳು ತಮ್ಮ ಬಳಿ ಏನಿದೆಯೆಂದು ಕಟುವಾಗಿ ಪ್ರಶ್ನಿಸಿದರು.
::: ಕೊಡಗು ಬಿಜೆಪಿ ಮುಕ್ತ :::
ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಕೊಡಗು ಬಿಜೆಪಿ ಮುಕ್ತವಾಗಿದೆ. ಬಿಜೆಪಿ ಆಡಳಿತಲ್ಲಿನ ವೈಫಲ್ಯಗಳ ಬಗ್ಗೆ ಪ್ರಜ್ಞಾವಂತ ಜನತೆ ಅರಿತಿದ್ದು, ಮುಂದಿನ ಸಂಸತ್ ಚುನಾವಣೆ ಮತ್ತು ಸ್ಥಳೀಯ ಚುನಾವಣೆಗಳಲ್ಲು ಇದೇ ತೀರ್ಪನ್ನು ಜನತೆ ನೀಡುವ ವಿಶ್ವಾಸವಿದೆಯೆಂದು ಸಂಕೇತ್ ಪೂವಯ್ಯ ಹೇಳಿದರು.










