ಕುಶಾಲನಗರ ಅ.2 : ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 154 ನೇ ಜಯಂತಿ ಅಂಗವಾಗಿ ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಚತಾ ಹಿ ಸೇವಾ ( ಸ್ವಚ್ಚತೆಯೇ ಸೇವೆ) ಅಭಿಯಾನದ ಮೂಲಕ ಶ್ರಮದಾನ ಕಾರ್ಯ ನಡೆಸಲಾಯಿತು.
ಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ( ಎನ್ನೆಸ್ಸೆಸ್) ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಸುಂಟಿಕೊಪ್ಪ ಜೆಸಿಐ ಸಂಸ್ಥೆ, ಎಸ್ ಡಿ ಎಂ ಸಿ ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿಗೆ ಮುನ್ನಾ ದಿನ ಕೂಡ್ಲೂರು ಗ್ರಾಮದ ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.
ಶಾಲಾವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ
ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ “ಸ್ವಚ್ಛ ತಾ ಹಿ ಸೇವೆ” ಹಾಗೂ ಶ್ರಮದಾನದ ಮಹತ್ವ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,
ಸ್ವಚ್ಛ ಭಾರತ್ ಮಿಷನ್ ವತಿಯಿಂದ ದೇಶದ ಜನರಲ್ಲಿ ಸ್ವಚ್ಛತೆ, ಆರೋಗ್ಯ, ನೈರ್ಮಲ್ಯ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
“ಸ್ವಚ್ಛತೆಯೇ ಸೇವೆ” ಆಂದೋಲನವು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತೆಯೆಡೆಗೆ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ನಾವು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಇಡೀ ರಾಷ್ಟ್ರವನ್ನು ಸ್ವಚ್ಛ ದೇಶವನ್ನಾಗಿ ರೂಪಿಸಲು ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.











