ಸುಂಟಿಕೊಪ್ಪ ಅ.2 : ಮಲಯಾಳಿ ಸಮಾಜದ ಸಂಸ್ಕೃತಿ ವಿಶಿಷ್ಟವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವ ಜನಾಂಗ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು.
ಸುಂಟಿಕೊಪ್ಪ ಮಲಯಾಳಿ ಸಮಾಜದ 16ನೇ ವಾರ್ಷಿಕೋತ್ಸವ ಮತ್ತು ಓಣಂ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಘೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಮಲಯಾಳಿ ಸಮಾಜದಲ್ಲಿ ಬಡವರು, ಅವಿದ್ಯಾವಂತರು ಇನ್ನೂ ಇದ್ದಾರೆ. ಇವರುಗಳನ್ನು ಮುಖ್ಯ ವಾಹಿನಿಗೆ ತರಬೇಕು. ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಶಕ್ತರಾಗಬೇಕೆಂದು ಕರೆ ನೀಡಿದರು.
ಸುಂಟಿಕೊಪ್ಪ ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್.ಸುಕುಮಾರ್ ಮಾತನಾಡಿ 16 ವರ್ಷದ ಹಿಂದೆ ಸ್ಥಾಪಿಸಲಾದ ಸಮಾಜ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ಕೊಡಗಿನಲ್ಲಿ ಪ್ರಥಮವಾಗಿ ಸ್ಥಾಪಿಸಿದ ಮಲಯಾಳಿ ಸಮಾಜ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ಸರಕಾರದ ಸೌಲಭ್ಯ ಪ್ರತಿಯೊಬ್ಬರು ಪಡೆದುಕೊಳ್ಳವಂತಾಗಬೇಕು, ರಾಜಕೀಯವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಅಪ್ಪಟ ಮನುಷ್ಯ ಪ್ರೀತಿಯ ಸಾಕಾರ ಮೂರ್ತಿಯಾಗಿದ್ದ ಶ್ರೀನಾರಾಯಣ ಗುರುಗಳ ಅನುಯಾಯಿಗಳಾದ ಮಲೆಯಾಳಿಗಳು ಪ್ರಪಂಚದ ಎಲ್ಲೆಡೆ ನೆಲೆಸಿದ್ದಾರೆ, ಆಧ್ಯಾತ್ಮಿಕವಾಗಿ ಕೊಡಗಿನೊಂದಿಗೆ ಸಾಮ್ಯತೆ ಹೊಂದಿದ್ದಾರೆ. ಕೊಡಗನ್ನು ಶ್ರೀಮಂತಗೊಳಿಸುವಲ್ಲಿ ಮಲೆಯಾಳಿ ಸಮಾಜದ ಕೊಡುಗೆ ಅಪಾರವಾದುದು ಎಂದರು.
ಮಡಿಕೇರಿ ತಾಲ್ಲೂಕು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಓಣಂ ನ್ನು ಸಾಂಪ್ರದಾಯಿಕವಾಗಿ ಆಚರಿಸಲು ಹಿರಿಯರು ಮಕ್ಕಳಿಗೆ ತಿಳಿಹೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಆಚಾರ, ಸಂಪ್ರದಾಯ, ಸಂಸ್ಕೃತಿ ನಶಿಸಿ ಹೋಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ ಓಣಂ ಹಬ್ಬವನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ಕೇರಳದಲ್ಲಿ ಎಲ್ಲರೂ ಆಚರಿಸುತ್ತಾರೆ. ಸೌಹಾರ್ದತೆಯ ಸಂಕೇತವಾಗಿ ಕೊಡಗಿನಲ್ಲೂ ಓಣಂ ಹಬ್ಬ ಆಚರಿಸಲಾಗುತ್ತಿದೆ ಎಂದರು.
ಸುಂಟಿಕೊಪ್ಪ ಮಲಯಾಳಿ ಸಮಾಜದ ಮರಣ ನಿಧಿಗೆ ಪಿ.ಎಂ.ಲತೀಫ್ ಹಾಗೂ ಅನೂಪ್ ಕುಮಾರ್ ತಲಾ 25 ಸಾವಿರ ರೂ. ದೇಣಿಗೆಯನ್ನು ಇದೇ ಸಂದರ್ಭ ನೀಡಿದರು.
ಮಹಿಳೆಯರು ಹಾಗೂ ಪುರುಷರು ಕೇರಳದ ಚಂಡೆ ವಾದ್ಯದೊಂದಿಗೆ ಬಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. 2023ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಅವರನ್ನು ಕೂಡ ಸನ್ಮಾನಿಸಲಾಯಿತು. ಕುಮಾರಿ ಮೋನಿಕಾ ಸ್ವಾಗತಿಸಿ ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ಕೆ.ಎಸ್.ಅನಿಲ್ ಹಾಗೂ ಶಿವಮಣಿ ಕಾರ್ಯಕ್ರಮ ನಿರೂಪಿಸಿದರು.












