ಮಡಿಕೇರಿ, ಅ.4 : ಶಾಂತಿನಿಕೇತನ ಯುವಕ ಸಂಘದ 45ನೇ ವರ್ಷದ ಗಣೇಶ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಸೆ.19 ರಂದು ಪ್ರತಿಷ್ಠಾಪಿಸಲ್ಪಟ್ಟು 15 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಗಮನ ಸೆಳೆದ ಮಂಟಪ : ಗಣೇಶ ಮೂರ್ತಿ ವಿಸರ್ಜನೋತ್ಸವ ಅಂಗವಾಗಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ರೂ.12 ಲಕ್ಷ ವೆಚ್ಚದಲ್ಲಿ “ಲೋಕ ಕಲ್ಯಾಣಕ್ಕಾಗಿ ಸಿಂಧೂರ ರಾಕ್ಷಸನನ್ನು ವಧಿಸುವ ಮೂಲಕ ಗಣಪತಿಗೆ ಸಿಂಧೂರ ಗಣಪ” ಎಂಬ ಹೆಸರು ಬಂದಿರುವ ಚಲನವಲನ ಹೊಂದಿರುವ ಕಥಾನಕ ಎಲ್ಲರ ಗಮನ ಸೆಳೆಯಿತು.
ಮಂಟಪದ ಪ್ರದರ್ಶನ ನಡೆಯಿತು. ಬ್ರಹ್ಮನ ಮಗ ಸಿಂಧೂರ ದೇವಲೋಕವನ್ನು ವಶಪಡಿಸಿಕೊಳ್ಳಲು ಯುದ್ಧಕ್ಕೆ ಮುಂದಾದ ಸಂದರ್ಭ ನಡೆಯುವ ಸನ್ನಿವೇಶಗಳನ್ನು ಮನಮೋಹಕವಾಗಿ ಕಟ್ಟಿಕೊಡಲಾಯಿತು.
ಕಥಾನಕ ಪ್ರದರ್ಶನ ಸಂದರ್ಭ ಚಿಮ್ಮುವ ಹೊಗೆ, ಬೆಂಕಿ ಹಾಗೂ ಸಿಡಿಯುವ ಪಟಾಕಿಗಳು ರೋಮಾಂಚನ ಅನುಭವ ನೀಡಿತು. ಶಾಂತಿನಿಕೇತನ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಜನರತ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಚೌಡೇಶ್ವರಿಯಲ್ಲಿ ದೇವಾಲಯದ ಮುಂದೆ ನಡೆದ ಮಂಟಪದ ಪ್ರದರ್ಶನ ನೀಡಲಾಯಿತು.
ಮಂಟಪದಲ್ಲಿ ಬೆಂಗಳೂರಿನ ಆರ್.ಜೆ. ಸ್ಟುಡಿಯೋ ದವರಿಂದ ಅತ್ಯಾಧುನಿಕ ಕೂಲ್ ಫೈರ್ ಹಾಗೂ ಸ್ಟುಡಿಯೋ, ಸೆಟ್ಟಿಂಗ್, ಮಡಿಕೇರಿಯ ಗುರು ಲೈಟಿಂಗ್ಸ್‍ನ ಲೋಕೇಶ್ ಅವರ ಸೌಂಡ್ಸ್ ಉತ್ಸವದ ಮೆರುಗು ಹೆಚ್ಚಿಸಿತು. ಶೋಭಾಯಾತ್ರೆಯಲ್ಲಿ ಜನರು ಕುಣಿದು ಕುಪ್ಪಳಿಸಿದರು. ವಿಸರ್ಜನೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರಾಜ್, ಡಿವೈಎಸ್‍ಪಿ ಜಗದೀಶ್ ನೇತೃತ್ವದಲ್ಲಿ ನಗರ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು.
ವಿಜಯ್ ಮತ್ತು ತಂಡದಿಂದ ಚಲನವಲನ, ಡಿಕೇರಿಯ ಕಲಾವಿದ ರವಿ ಮತ್ತು ತಂಡ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.







