ಮಡಿಕೇರಿ ಅ.7 : ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಅನುದಾನ ಬಿಡುಗಡೆಯ ಕುರಿತು ಗೊಂದಲಗಳು ಮುಂದುವರೆದಿದ್ದು, ನೈಜಾಂಶ ಏನು ಎಂಬುವುದನ್ನು ಸರ್ಕಾರ ಕೊಡಗಿನ ಜನತೆಯ ಮುಂದೆ ಬಹಿರಂಗ ಪಡಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಹಾಗೂ ಪ್ರಮುಖರಾದ ಸಿ.ಎಸ್.ರವೀಂದ್ರ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಜನರನ್ನು ಗೊಂದಲದಲ್ಲಿ ಸಿಲುಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಹವಣಿಸುತ್ತಿವೆ ಎಂದು ಟೀಕಿಸಿದ್ದಾರೆ.
ವಿರಾಜಪೇಟೆಯ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಈ ಹಿಂದಿನ ಬಿಜೆಪಿ ಸರ್ಕಾರ ನಿಗಮ ಸ್ಥಾಪಿಸಿ 10 ಕೋಟಿ ರೂ. ಅನುದಾನ ನೀಡಿದೆ ಎಂದು ಹೇಳಿದ್ದಾರೆ. ಆದರೆ ಇದೇ ವೇದಿಕೆಯಲ್ಲಿ ಕಾಂಗ್ರೆಸ್ ಶಾಸಕರು ನಿಗಮಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲವೆಂದು ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಕೊಡವ ಅಭಿವೃದ್ಧಿ ನಿಗಮ ಅಸ್ತಿತ್ವದಲ್ಲಿದೆಯೇ ಎನ್ನುವ ಸಂಶಯ ಮೂಡುತ್ತದೆ. ಅಲ್ಲದೆ ಅನುದಾನ ಬಿಡುಗಡೆಯಾಗಿದ್ದರೆ ಹಣ ಎಲ್ಲಿಗೆ ಹೋಯಿತು, ಅಧ್ಯಕ್ಷರ ನೇಮಕವಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಜನರಲ್ಲಿ ಮೂಡಿರುವ ಸಂಶಯಗಳನ್ನು ದೂರ ಮಾಡಬೇಕಾದರೆ ಸರ್ಕಾರ ಸೂಕ್ತ ತನಿಖೆ ನಡೆಸಿ ಅಭಿವೃದ್ಧಿ ನಿಗಮದ ಅಸ್ತಿತ್ವದ ಕುರಿತು ಸ್ಪಷ್ಟೀಕರಣ ನೀಡಬೇಕು. ಒಂದು ವೇಳೆ ನಿಗಮ ಅಧಿಕೃತವಾಗಿದ್ದರೆ ಈಗಿನ ಸರ್ಕಾರ ತಕ್ಷಣ ಅಧ್ಯಕ್ಷರನ್ನು ನೇಮಕ ಮಾಡಬೇಕು ಮತ್ತು ಘೋಷಿಸಿರುವ ಅನುದಾನವನ್ನು ಬಿಡುಗಡೆ ಮಾಡಿ ಕೊಡವರ ಅಭಿವೃದ್ಧಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೊಡವರ ಭಾವನೆಗಳಿಗೆ ದಕ್ಕೆ ಉಂಟು ಮಾಡಿ ಕ್ಷುಲ್ಲಕ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಬೇಕೆಂದು ಭೋಜಣ್ಣ ಹಾಗೂ ರವೀಂದ್ರ ಆಗ್ರಹಿಸಿದ್ದಾರೆ.










