ಮಡಿಕೇರಿ ಅ.7 : ಎಮ್ಮೆಮಾಡಿನಲ್ಲಿ ಬಹಿರಂಗವಾಗಿ ಕಲಹ ಉಂಟು ಮಾಡಿದ ನಾಲ್ವರನ್ನು ಮೊಹಲ್ಲಾದ ಮಾರ್ಗದರ್ಶನಂತೆ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆಯೇ ಹೊರತು ಸಾಮಾಜಿಕ ಬಹಿಷ್ಕಾರ ಮಾಡಿಲ್ಲವೆಂದು ಎಮ್ಮೆಮಾಡು ಜಮಾಅತ್ ಸ್ಪಷ್ಟಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧೀನದಲ್ಲಿ ಮೂರು ದಿನಗಳ ಕಾಲ ನಡೆದ ಈದ್ ಮಿಲಾದ್ ಕಾರ್ಯಕ್ರಮದ ಜಾಥಾದಲ್ಲಿ ಮತ್ತು ವಿದ್ಯಾರ್ಥಿಗಳ ಕಲಾ ಪ್ರದರ್ಶನದಲ್ಲಿ ಉಸ್ತಾದರನ್ನು ಹಾಗೂ ಆಡಳಿತ ಮಂಡಳಿಯವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ ಕಾರಣಕ್ಕಾಗಿ ಶಿಸ್ತು ಪಾಲನೆಯ ಮಾರ್ಗದರ್ಶನದಂತೆ ನಾಲ್ವರ ವಿರುದ್ಧ ತಾತ್ಕಾಲಿಕ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಇದು ಈ ಆಡಳಿತ ಮಂಡಳಿಯ ಹೊಸ ನಿರ್ಧಾರವಲ್ಲ, ಎಲ್ಲಾ ಜಮಾಅತ್ ನಂತೆ ಎಮ್ಮೆಮಾಡು ಜಮಾಅತ್ ಕೂಡ ಕ್ರಮ ಕೈಗೊಂಡಿದೆ. ಜಮಾಅತ್ ನ ನಿರ್ಧಾರದಂತೆ ನಾಲ್ವರು ಕ್ಷಮೆಯಾಚಿಸಿದಲ್ಲಿ ಅಮಾನತು ಕ್ರಮವನ್ನು ಕೈ ಬಿಡುವುದಾಗಿ ತಿಳಿಸಿದರು.
ಜಮಾಅತ್ ಮತ್ತು ಆಡಳಿತ ಮಂಡಳಿಯ ನಿರ್ಧಾರದ ಕುರಿತು ತಪ್ಪು ಹೇಳಿಕೆಗಳನ್ನು ನೀಡುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅಬೂಬಕ್ಕರ್ ಇದನ್ನು ಖಂಡಿಸುವುದಾಗಿ ಹೇಳಿದರು.
ಉಪಾಧ್ಯಕ್ಷ ಬಿ.ಯು.ಅಶ್ರಫ್ ಮಾತನಾಡಿ, ಅಮಾನತುಗೊಂಡ ನಾಲ್ವರಲ್ಲಿ ಈ ಹಿಂದೆ ಜಮಾಅತ್ ನಲ್ಲಿ ಕಾರ್ಯನಿರ್ವಹಿಸಿದವರೂ ಇದ್ದಾರೆ. ಇವರಿಗೆ ಜಮಾಅತ್ ನಿಯಮಗಳ ಬಗ್ಗೆ ಅರಿವಿದೆ. ಆದರೂ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಘಟನೆ ಕುರಿತು ನಾಲ್ವರು ಕ್ಷಮೆ ಕೋರಿದಲ್ಲಿ ಸಮಸ್ಯೆ ಸೌಹಾರ್ದತೆಯಿಂದ ಬಗೆಹರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ಎನ್.ಕೆ.ಅಲಿ, ಪ್ರಧಾನ ಕಾರ್ಯದರ್ಶಿ ಪಿ.ಕೆ. ಹ್ಯಾರಿಸ್ ಹಾಗೂ ಸದಸ್ಯ ಕೆ.ಎ.ಉಸ್ಮಾನ್ ಉಪಸ್ಥಿತರಿದ್ದರು.









