ಮಡಿಕೇರಿ ಅ.7 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅ.9 ರಿಂದ ಅ.14 ರವರೆಗೆ ಮೂರನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರದನುಷ್ 5.0 ಲಸಿಕಾ ಕಾರ್ಯಕ್ರಮ ನಡೆಯಲಿದೆ.
ಇದರ ಪ್ರಯುಕ್ತ ಲಸಿಕೆಗೆ ಅರ್ಹ ಗರ್ಭಿಣಿಯರಿಗೆ, 2 ವರ್ಷದೊಳಗಿನ ಅರ್ಹ ಮಕ್ಕಳಿಗೆ ಹಾಗೂ ಲಸಿಕೆ ವಂಚಿತ ಗರ್ಭಿಣಿಯರು ಮತ್ತು ಲಸಿಕೆ ವಂಚಿತ 2-5 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ಅಂಗನವಾಡಿಗಳು, ಉಪ ಕೇಂದ್ರಗಳು, ಪ್ರಾ.ಆ.ಕೇಂದ್ರಗಳಲ್ಲಿ ಹಾಗೂ ಸಮುದಾಯ ಮಟ್ಟದಲ್ಲಿ ಲಸಿಕಾ ಶಿಬಿರ ಆಯೋಜಿಸಿ ಅರ್ಹ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.
ಕ್ಷೇತ್ರ ಮಟ್ಟದ ಲಸಿಕಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂಧಿಗಳು ಭಾಗವಹಿಸುವರು. ಪರಿಣಾಮಕಾರಿ ಮಿಷನ್ ಇಂದ್ರದನುಷ್ 5.0 ಕಾರ್ಯಕ್ರಮವು ನಾಯಿಕೆಮ್ಮು, ದಡಾರ-ರುಬೆಲ್ಲಾ, ಪೋಲಿಯೋ, ಗಂಟಲು ಮಾರಿ, ನ್ಯುಮೋನಿಯಾ, ಅತಿಸಾರ ಭೇದಿ, ಹೈಪಟೈಟಿಸ್-ಬಿ, ಧನುರ್ವಾಯು ಮತ್ತು ಕ್ಷಯರೋಗಗಳನ್ನು ಲಸಿಕೆಯಿಂದ ಮಾತ್ರವೇ ತಡೆಯಬಹುದಾಗಿದ್ದು, ಈ ಕಾರಣಕ್ಕಾಗಿ ಅಲ್ಲದೇ 2 ವರ್ಷದ ವಯಸ್ಸಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಭ್ಯವಿರುವ ಎಲ್ಲಾ ಲಸಿಕೆಗಳನ್ನು ಖಚಿತಪಡಿಸಿಕೊಳ್ಳಲು ಗುರಿ ಹೊಂದಿ ಈ ಅಭಿಯಾನ ನಡೆಸಲಾಗುತ್ತಿದೆ.
ಇದರ ಬಗ್ಗೆ ಪಟ್ಟಣ ಪಂಚಾಯತ್/ ಪುರಸಭೆ/ ಗ್ರಾಮ ಪಂಚಾಯತ್‍ಗಳಲ್ಲಿನ ತ್ಯಾಜ್ಯ ಸಂಗ್ರಹಣಾ ವಾಹನಗಳ ದ್ವನಿ ವರ್ಧಕಗಳಲ್ಲಿ ರೇಡಿಯೋ ಜಿಂಗಲ್ಸ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಕೋರಿದ್ದಾರೆ.









