ಮಡಿಕೇರಿ ಅ.9 : ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ದಸರಾ ಕ್ರೀಡಾ ಸಮಿತಿ ವತಿಯಿಂದ ಅ.15 ರಿಂದ 22 ರವರೆಗೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕಪಿಲ್ ದುಗ್ಗಳ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಕ್ರೀಡಾಕೂಟಕ್ಕೆ ಅ.15 ರಂದು ಬೆಳಗ್ಗೆ ಚಾಲನೆ ದೊರಕಲಿದೆ. ಆರಂಭಿಕ ದಿನದಂದು ಪುರುಷರು, ಮಹಿಳೆಯರು, 1 ರಿಂದ 4ನೇ ತರಗತಿ ವಿದ್ಯಾರ್ಥಿಗಳು, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳು, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪಿಯುಸಿ ವಿದ್ಯಾರ್ಥಿಗಳ ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆಗಳು ನಡೆಯಲಿವೆ. ಬೆಳಗ್ಗೆ 6.30 ಗಂಟೆಗೆ ಆರಂಭಗೊಳ್ಳುವ ಮ್ಯಾರಥಾನ್ ಜನರಲ್ ತಿಮ್ಮಯ್ಯ ವೃತ್ತದಿಂದ ವಿವಿಧ ವಿಭಾಗಗಳಿಗೆ ಅನುಗುಣವಾಗಿ ಕ್ಯಾಪಿಟಲ್ ವಿಲೇಜ್‍ವರೆಗೆ ನಡೆಯಲಿದೆ ಎಂದರು.
ಅಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗೆ ಬಾಸ್ಕೆಟ್ ಬಾಲ್, ಸಾರ್ವಜನಿಕ ಮುಕ್ತ ವಿಭಾಗದಲ್ಲಿ ಫುಟ್ಬಾಲ್( 5+2 ಆಟಗಾರರು) ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿ ವಿಜೇತ ತಂಡಕ್ಕೆ 15 ಸಾವಿರ ರೂ. ನಗದು ಮತ್ತು ಟ್ರೋಫಿ, ರನ್ನರ್ಸ್ ಅಪ್ ತಂಡಕ್ಕೆ 10 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.
::: ಚೆಸ್ ಪಂದ್ಯಾವಳಿ :::
ಅ.16 ರಂದು ನಗರದ ರಾಜದರ್ಶನ್ ಹೋಟೆಲ್ ಸಭಾಂಗಣದಲ್ಲಿ 9 ವರ್ಷದ ಒಳಗಿನ ಮಕ್ಕಳು, 9 ರಿಂದ 15 ವರ್ಷ ವಯೋಮಿಯ ಮಕ್ಕಳು ಮತ್ತು ಮುಕ್ತ ವಿಭಾಗದಲ್ಲಿ ಚೆಸ್ ಪಂದ್ಯಾವಳಿ ಹಾಗೂ ಮುಕ್ತ ಕೇರಂ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾವಳಿ ನಡೆಯಲಿದೆ.
::: ಅಥ್ಲೆಟಿಕ್ಸ್ :::
ಅ.18 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಯೋಮಿತಿಗೆ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ, ಮುಕ್ತ ರಿಲೇ, ದಸರಾ ಸಮಿತಿಯವರಿಗೆ ಓಟದ ಸ್ಪರ್ಧೆ, ಸಾರ್ವಜನನಿಕರಿಗೆ ಮತ್ತು ದಸರಾ ಸಮಿತಿಯವರಿಗೆ ಭಾರದ ಗುಂಡು ಎಸೆತ, ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಹಗ್ಗಜಗ್ಗಾಟ, ಸಾರ್ವಜನಿಕ ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಹಾಗೂ ತಾಲ್ಲೂಕು ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ಪುರುಷರಿಗೆ ನಿಧಾನ ದ್ವಿಚಕ್ರ ವಾಹನ ಚಾಲನೆ (ಗೇರ್ ಮೋಟಾರ್ ವಾಹನ), ಮಹಿಳೆಯರಿಗೆ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆಯೆಂದರು.
::: ದಿವ್ಯಾಂಗರ ಕ್ರೀಡಾಕೂಟ :::
ಅ.18 ರಂದೇ ದಿವ್ಯಾಂಗರಿಗೆ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರಲ್ಲಿ 1 ರಿಂದ 4ನೇ ತರಗತಿ ವಿದ್ಯಾರ್ಥಿಗಳು, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳು, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀ. ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
::: ಕ್ರಿಕೆಟ್ ಮತ್ತು ಮ್ಯಾಟ್ ಕಬಡ್ಡಿ :::
ಅ.19 ರಂದು ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅ.22 ರಂದು ಗಾಂಧಿ ಮೈದಾನದಲ್ಲಿ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆಂದರು.
ದಸರಾ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳಿಗೆ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಮೊ.7338547897, ಪ್ರಧಾನ ಕಾರ್ಯದರ್ಶಿ ಮೊ.9731009841, ಗೌರವಾಧ್ಯಕ್ಷ ಕ್ರಿಸ್ಟೋಫರ್ ಮೊ.7019909495 ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ, ಗೌರವಾಧ್ಯಕ್ಷ ಕ್ರಿಸ್ಟೋಫರ್, ನಿರ್ದೇಶಕರುಗಳಾದ ನಯನ್ ಕುಮಾರ್, ರವಿ ಕೆ.ಆರ್ ಹಾಗೂ ಪೀಟರ್ ಡಿ.ಜೆ. ಉಪಸ್ಥಿತರಿದ್ದರು.