ಮಡಿಕೇರಿ ಅ.9 : ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿ, ಪರಿಶಿಷ್ಟರು ವಾಸಿಸುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ(ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕೆ ಇಲಾಖೆಗಳು ಆದ್ಯತೆ ನೀಡಬೇಕು ಮತ್ತು ಸಕಾಲದಲ್ಲಿ ಸ್ಪಂದಿಸಬೇಕು ಎಂದರು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಎಚ್.ಎಸ್.ಮುತ್ತಪ್ಪ ಅವರು ಐಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಪರಿಶಿಷ್ಟರು ವಾಸಿಸುವ ಗ್ರಾಮಗಳಿಗೆ ಕುಡಿಯುವ ನೀರು ಸಂಪರ್ಕ, ತಡೆಗೋಡೆ ನಿರ್ಮಾಣ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಕೋರಿದರು.
ಮತ್ತೊಬ್ಬ ಸಮಿತಿ ಸದಸ್ಯರಾದ ಪಳನಿ ಪ್ರಕಾಶ್ ಅವರು ಮಾತನಾಡಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಾಸಮಾಡುವ ಪರಿಶಿಷ್ಟರಿಗೆ ಭೂಮಿ ಸಂಬಂಧ ನಿವೇಶನ ಹಕ್ಕು ಪತ್ರ ಇಲ್ಲದವರಿಗೆ ನಿವೇಶನ ಹಕ್ಕುಪತ್ರ ನೀಡುವಂತಾಗಬೇಕು. ಇದರಿಂದ ಕುಡಿಯುವ ನೀರು, ವಿದ್ಯುತ್, ರಸ್ತೆ, ಅಂಗನವಾಡಿ ಮತ್ತಿತರ ಮೂಲ ಸೌಲಭ್ಯ ಪಡೆಯಲು ಸಾಧ್ಯ. ಇಂತಹ ಬಡಾವಣೆಗಳನ್ನು ಗುರುತಿಸಿ ನಿವೇಶನ ಹಕ್ಕು ಪತ್ರ ನೀಡುವಂತಾಗಬೇಕು ಎಂದು ಅವರು ಮನವಿ ಮಾಡಿದರು.
94ಸಿ ಮತ್ತು 94ಸಿಸಿರಡಿ ಹಾಗೂ ನಮೂನೆ 57 ರಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ಆರ್‍ಟಿಸಿ ವಿತರಿಸುವಂತಾಗಬೇಕು ಎಂದು ಪಳನಿ ಪ್ರಕಾಶ್ ಅವರು ಕೋರಿದರು.
ಮತ್ತೊಬ್ಬ ಸಮಿತಿ ಸದಸ್ಯರಾದ ಜಾಯ್ಸ್ ಮೆನೇಜಸ್ ಅವರು ಮಾತನಾಡಿ ಬಾಳೆಗುಂಡಿಯಲ್ಲಿ 95 ಕುಟುಂಬಗಳು ವಾಸಮಾಡುತ್ತಿದ್ದು, ಈ ಕುಟುಂಬಗಳಿಗೆ ಪಡಿತರ ಚೀಟಿ ಒದಗಿಸುವಂತಾಗಬೇಕು ಎಂದರು.
ಸದಸ್ಯರಾದ ಪಿ.ಪಿ.ಸುಕುಮಾರ್ ಅವರು ಮಾತನಾಡಿ ಪರಿಶಿಷ್ಟ ಕುಟುಂಬಗಳಿಗೆ ಹಲವು ಮೂಲಸೌಲಭ್ಯಗಳು ದೊರೆಯಬೇಕಿದ್ದು, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ ಜಿಲ್ಲೆಯ ವಿವಿಧ ಗ್ರಾ.ಪಂ.ವ್ಯಾಪ್ತಿಗಳಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ಹಾಗೂ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. ಆ ನಿಟ್ಟಿನಲ್ಲಿ ಆಯಾಯ ಗ್ರಾ.ಪಂ. ವ್ಯಾಪ್ತಿಗೆ ಪಟ್ಟಿ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ಬಳಿಕ ಸಫಾಯಿ ಕರ್ಮಚಾರಿ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಖಾಯಂ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಸಮಿತಿ ಸದಸ್ಯರಾದ ರಂಗಸ್ವಾಮಿ ಅವರು ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ ನೀಡಬೇಕು. ಜೊತೆಗೆ 20-30 ವರ್ಷಗಳಿಂದ ಗ್ರಾ.ಪಂ.ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಖಾಯಂ ಮಾಡಬೇಕು. ನಿವೇಶನ ರಹಿತರಿಗೆ ನಿವೇಶನ ನೀಡುವುದು. ಜೊತೆಗೆ ಮನೆ ನಿರ್ಮಿಸಬೇಕು ಎಂದು ಅವರು ಕೋರಿದರು.
ಸಫಾಯಿ ಕರ್ಮಚಾರಿಗಳಿಗೆ ಸಮಾನ ಕ್ಷೇತ್ರಕ್ಕೆ ಸಮಾನ ವೇತನ ನೀಡುವಂತಾಗಬೇಕು. ಸಫಾಯಿ ಕರ್ಮಚಾರಿಗಳು ಸೇರಿದಂತೆ ಎಲ್ಲರಿಗೂ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಪಳನಿ ಪ್ರಕಾಶ್ ಅವರು ಗಮನ ಸೆಳೆದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಸಂಬಂಧಿಸಿದಂತೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಪುನರ್‍ವಸತಿ ಕಲ್ಪಿಸಬೇಕಿದೆ. ಗುರುತಿನ ಚೀಟಿ ನೀಡುವುದು, ಶಾಲಾ-ಕಾಲೇಜು ಪ್ರವೇಶಕ್ಕೆ ಉಚಿತ ಅವಕಾಶ ಕಲ್ಪಿಸುವುದು, ಶಿಷ್ಯವೇತನ ಪಾವತಿಸುವುದು, ಸಫಾಯಿ ಕರ್ಮಚಾರಿ ಕುಟುಖಬದ ಮಕ್ಕಳ ವಿದ್ಯಾಭ್ಯಾಸ ಸಂಬಂಧ ಪ್ರವೇಶ ಪರೀಕ್ಷೆ ಇಲ್ಲದೆ ವಸತಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಮಾಡುವುದು. ಗ್ರಾಮೀಣ ಪ್ರದೇಶದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮತ್ತು ಪಟ್ಟಣ/ ಪುರಸಭೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡುವುದು. ಮತ್ತಿತರ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಒದಗಿಸಬೇಕಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಸಫಾಯಿ ಕರ್ಮಚಾರಿಗಳಿಗೆ ಕಾನೂನು ನೆರವು ನೀಡುವುದರ ಜೊತೆಗೆ, ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇತರರು ಇದ್ದರು.









