ಮಡಿಕೇರಿ ಅ.10 : ಅತ್ಯಂತ ಸರಳವಾಗಿ ಮಹಾಭಾರತದ ಬಗ್ಗೆ ಯುವ ಸಮೂಹಕ್ಕೆ, ಅದರಲ್ಲೂ ಎಳೆಯರಿಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಸಾಹಿತಿ ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಅವರು ರಚಿಸಿರುವ ‘ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ’ ಪುಸ್ತಕವನ್ನು ಕರ್ನಾಟಕ ಜಾನಪದ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಅನಾವರಣಗೊಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಸುದ್ದಿಗೋಷ್ಠಿಯಲ್ಲಿ ಪುಸ್ತಕವನ್ನು ಉದ್ಘಾಟಿಸಿ ಮಾತನಾಡಿದ ಅನಂತಶಯನ, ನಮ್ಮ ಶ್ರೀಮಂತ ಸಂಸ್ಕೃತಿಯ ಸಂಪತ್ತು ಅರಿಯದ ನಮ್ಮ ನಡೆಗಳು ಹಲವಾರು ಬಾರಿ ಇತರರ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಗೌರಮ್ಮ ಮಾದಮ್ಮಯ್ಯ ಅವರು ಬರೆದಿರುವ ಮಹಾಭಾರತವನ್ನು ಪ್ರಶ್ನೋತ್ತರಗಳ ಮೂಲಕ ತಿಳಿಸಿಕೊಡುವ ಪ್ರಯತ್ನ ಅತ್ಯಂತ ಶ್ಲಾಘನೀಯವೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಹಿರಿಯ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಅವರು ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳಿಂದು ನಶಿಸುತ್ತಿರುವುದಕ್ಕೆ, ನಮ್ಮಲ್ಲಿನ ಶ್ರೀಮಂತ ಸಂಸ್ಕೃತಿಯ ಬಗ್ಗೆ ಅರಿವನ್ನು ಹೊಂದಿರುವುದೇ ಪ್ರಮುಖ ಕಾರಣ. ನಮ್ಮ ಸಾಂಸ್ಕೃತಿಕ ವೈಭವವನ್ನು ಮತ್ತೆ ಪಡೆಯಲು, ಯುವ ಸಮೂಹಕ್ಕೆ ಅರಿವು ಮೂಡಿಸುವ ಇಂತಹ ಪುಸ್ತಕಗಳು ಕಾರಣವಾಗಲ್ಲುದೆಂದು ವಿಶ್ವಾಸದಿಂದ ನುಡಿದು, ಪೋಷಕರು ತಮ್ಮ ಮಕ್ಕಳಿಗೆ ಎಳವೆಯ ಹಂತದಿಂದಲೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಅರಿವನ್ನು ಮೂಡಿಸಿ, ಹಿರಿಯರನ್ನು ಗೌರವಿಸುವ ಚಿಂತನೆಗಳನ್ನು ಹುಟ್ಟು ಹಾಕಿದಾಗ ಅವರು ಸನ್ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕರಾದ ಗೌರಮ್ಮ ಮಾದಮ್ಮಯ್ಯ, ಸಾಹಿತಿ ಸುಬ್ರಾಯ ಸಂಪಾಜೆ ಅವರು ರಚಿಸಿರುವ ಪ್ರಶ್ನೋತ್ತರಗಳ ರಾಮಾಯಣ ಪುಸ್ತಕವು, ಮಹಾಭಾರತವನ್ನು ಅದೇ ಮಾದರಿಯಲ್ಲಿ ರಚಿಸಲು ತನಗೆ ಪ್ರೇರಣೆಯನ್ನು ನೀಡಿತು. ಸುಮಾರು ಆರು ತಿಂಗಳ ಅಧ್ಯಯನದಿಂದ ‘ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ’ ಪುಸ್ತಕವನ್ನು ರಚಿಸಿದ್ದೇನೆ. ಈ ಪುಸ್ತಕವನ್ನು ಶಾಲೆಗಳಿಗೆ ಉಚಿತವಾಗಿ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಮೈಸೂರಿನ ನಯನ ಪ್ರಕಾಶನದ ಮೂಲಕ ಬೆಳಕು ಕಂಡಿರುವ ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ ಪುಸ್ತಕ 1016 ಪ್ರಶ್ನೆ ಮತ್ತು ಉತ್ತರದ ಮೂಲಕ ಮಹಾಭಾರತದ ಬಗ್ಗೆ ಅರಿವನ್ನು ನೀಡುವ ವಿಶಿಷ್ಟ ಪುಸ್ತಕವಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಜಿಲ್ಲಾ ಕಸಾಪ ಕೋಶಾಧಿಕಾರಿ ಸಂಪತ್ ಕುಮಾರ್, ಬಾಚಮ್ಮಂಡ ಮಾದಮ್ಮಯ್ಯ ಉಪಸ್ಥಿತರಿದ್ದರು.









