ಮಡಿಕೇರಿ ಅ.10 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷಂಪ್ರತಿ ಜಿಲ್ಲೆಯ ಮಹಿಳಾ ಲೇಖಕರಿಗೆ ನೀಡುತ್ತಿರುವ ಪ್ರತಿಷ್ಠಿತ ಕೊಡಗಿನ ಗೌರಮ್ಮ ಪ್ರಶಸ್ತಿಗೆ 2023-24 ಸಾಲಿಗೆ ಈರಮಂಡ ಹರಿಣಿ ವಿಜಯ್ ಹಾಗೂ ಕಟ್ರತನ ಲಲಿತಾ ಅಯ್ಯಣ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರಕಟಿಸಿದ ಅವರು, ಗೌರಮ್ಮ ಪುಸ್ತಕ ಪ್ರಶಸ್ತಿಗೆ ಈ ಬಾರಿ 12 ಲೇಖಕರು 15 ಪುಸ್ತಕಗಳನ್ನು ಕಳುಹಿಸಿದ್ದರು. ಇದರಲ್ಲಿ ಈರಮಂಡ ಹರಿಣಿ ವಿಜಯ್ ಅವರ ‘ಅಗ್ನಿ ಯಾತ್ರೆ’ ಮತ್ತು ಕಟ್ರತನ ಲಲಿತಾ ಅಯ್ಯಣ್ಣ ಅವರ ‘ಕಡಲಾಳದ ಮುತ್ತುಗಳು’ ಪುಸ್ತಕಗಳು ಸಮಾನ ಅರವತ್ತು ಅಂಕಗಳನ್ನು ಪಡೆದುಕೊಂಡ ಹಿನ್ನೆಲೆ. ಈ ಬಾರಿ ಪ್ರÀಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ನೀಡಲಾಗುತ್ತಿದೆಯೆಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕಸಾಪದಿಂದ ಇದೇ ಅ.27 ರಂದು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯುವ ಗೌರಮ್ಮ ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅಂದಿನ ಕಾರ್ಯಕ್ರಮವನ್ನು ಕಾಲೇಜಿನ ವೆಂಕಟೇಶ್ ಪ್ರಸಾದ್ ಅವರು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಇದೇ ಸಮಾರಂಭದಲ್ಲಿ ಗೌರಮ್ಮ ದತ್ತಿ ಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಈ ಬಾರಿಯ ಸ್ಪಧೆಯಲ್ಲಿ ಪ್ರಥಮ ಸ್ಥಾನವನ್ನು ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ತನ್ಮಯಿ ಎ.ಸಿ., ಚೆಂಬು ಶಾಲೆಯ ಬಿಂದು ದ್ವಿತೀಯ ಮತ್ತು ಮಡಿಕೇರಿ ಸರ್ಕಾರಿ ಪ್ರೌಢ ಶಾಲೆಯ ಅನುಷಾ ತೃತೀಯ ಬಹುಮಾನ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿದರು.
ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಕಾರ್ಯಕ್ರಮ- ‘ಶಕ್ತಿ’ ಪತ್ರಿಕೆಯ ಸಂಸ್ಥಾಪಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಸ್ಮರಣಾರ್ಥ ಅವರ ಪುತ್ರ ಬಿ.ಜಿ.ಅನಂತಶಯನ ಅವರು ಜಿಲ್ಲಾ ಕಸಾಪದಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದು, ಇದರ ಭಾಗವಾಗಿ ನಡೆದ ಕಥಾ ಸ್ಪರ್ಧೆಯಲ್ಲಿ ಈ ಬಾರಿ ಈರಮಂಡ ಹರಿಣಿ ವಿಜಯ್ ಅವರ ‘ಬದುಕು ಅರಿಯುವ ಮುನ್ನ’ ಕಥೆ ಪ್ರಥಮ ಸ್ಥಾನವನ್ನು, ಸಹನಾ ಕಾಂತಬೈಲು ಅವರ ‘ವಿನುತಾಕ್ಷಿ’ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ರೇಷ್ಮ ಮನೋಜ್ ಅವರ ‘ ಹೆಜ್ಜೆಗೊಂದು ನೆನಪು’ ಹಾಗೂ ಡಾ. ವಾಣಿ ಪುಷ್ಪರಾಜ್ ಅವರ ‘ಕಮರಿದ ಕುಸುಮ’ ಪಡೆದುಕೊಂಡಿರುವುದಾಗಿ ತಿಳಿಸಿದರು.
ದಿ.ಬಿ.ಎಸ್.ಗೋಪಾಲಕೃಷ್ಣ ಅವರ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮ ಅ.14 ರಂದು ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ಮಧ್ಯಾಹ್ನ 2.30 ಕ್ಕೆ ನಡೆಯಲಿದ್ದು, ಇದರಲ್ಲಿ ಬಹುಮಾನಗಳನ್ನು ಬಿ.ಜಿ. ಅನಂತಶಯನ ಅವರು ವಿತರಿಸಲಿದ್ದಾರೆಂದು ತಿಳಿಸಿದರು.
ದತ್ತಿ ಕಾರ್ಯಕ್ರಮವನ್ನು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಓ.ಎಂ.ಪಂಕಜಾಕ್ಷನ್ ಉದ್ಘಾಟಿಸಲಿದ್ದು, ದಿ. ಗೋಪಾಲಕೃಷ್ಣ ದತ್ತಿ ಉಪನ್ಯಾಸವನ್ನು ಖ್ಯಾತ ಸಾಹಿತಿಗಳಾದ ಕಾಲೂರು ನಾಗೇಶ್ ನಡೆಸಿಕೊಡಲಿದ್ದಾರೆಂದು ಮಾಹಿತಿಯನ್ನಿತ್ತರು.
ಸುವರ್ಣ ಸಂಭ್ರ್ರಮ ವೈವಿಧ್ಯಮಯ ಕಾರ್ಯಕ್ರಮ- ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪದಿಂದ ರಾಷ್ಟ್ರಕವಿ ಕುವೆಂಪು ಅವರ ಆಶಯಗಳನ್ನು ಆಧರಿಸಿದ ವಿವಿಧ ಕಾರ್ಯಕ್ರಮ, ರಾಜ್ಯಕ್ಕೆ ‘ಕರ್ನಾಟಕ’ವೆಂದು ನಾಮಕರಣ ಮಾಡಿದ ದೇವರಾಜ ಅರಸು ಅವರ ಚಿಂತನೆಯನ್ನು ಆಧರಿಸಿದ ಕಾರ್ಯಕ್ರಮ ಸೇರಿದಂತೆ ವರ್ಷವಿಡಿ ಕಾರ್ಯಕ್ರಮಗಳನ್ನು ರೂಪಿಸಲು ಚಿಂತಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪುರಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಸದಸ್ಯರಾದ ಫ್ಯಾನ್ಸಿ ಮುತ್ತಣ್ಣ, ಪ್ರೇಂ ಕುಮಾರ್ ಉಪಸ್ಥಿತರಿದ್ದರು.









