ಮಡಿಕೇರಿ ಅ.10 : ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಕಾರ್ಯಕ್ರಮದ ಪ್ರಯುಕ್ತ ಸಿದ್ದಾಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ, ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಸಾಮಾನ್ಯ ವೈದಶಾಸ್ತ್ರ, ಶಸ್ತ್ರ ಚಿಕಿತ್ಸೆ, ಕಣ್ಣು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವ್ಯೆದ್ಯಕೀಯ, ದಂತ, ಮಾನಸಿಕ ರೋಗ, ಆಸಾಂಕ್ರಾಮಿಕ ರೋಗಗಳ ನುರಿತ ತಜ್ಞ ವ್ಯೆದ್ಯರು ವೈದ್ಯಕೀಯ ಸೇವೆಯನ್ನು ನೀಡಲಾಯಿತು.
ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಮಡಿಕೇರಿ ವ್ಯೆದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮ ಗೋಪಾಲ್, ಕೊಡಗಿನ ಗಡಿಯಲ್ಲಿ ಹೆಚ್ಚು ಮಾನವ ಪ್ರಾಣಿ ಸಂಘರ್ಷಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವುದು ಮುಖ್ಯವಾಗಿರುತ್ತದೆ ಹಾಗೂ ಕನಿಷ್ಠ ಆರು ತಿಂಗಳಿಗೆ ಒಮ್ಮೆ ರೀತಿಯ ಬೃಹತ್ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು.
ಸಿದ್ದಾಪುರ ಗ್ರಾ.ಪಂ ಸದಸ್ಯ ದೇವಜನ್ ಮಾತನಾಡಿ, ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ನಡೆಸುತ್ತಿರುವ ಶ್ಲಾಘನೀಯ ಎಂದರು.
ಸ್ಥಾನೀಯ ವ್ಯೆದ್ಯಾಧಿಕಾರಿ ಡಾ. ವಿ.ಎಸ್.ಸತೀಶ್ ಮಾತನಾಡಿ, ರಾಷ್ಟ್ರಪತಿಗಳು ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗೂ ಜಿಲ್ಲೆಯ ವಿವಿಧ ಕಡೆ ಆರೋಗ್ಯ ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಆಯೋಜನೆ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಗುರಿ ಎಂದರು.
ಕೊಡಗು ವ್ಯೆದ್ಯಕೀಯ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು ಹಾಗೂ ಜಿಲ್ಲೆಯ ಗಡಿಭಾಗವಾದ ಸಿದ್ದಾಪುರ ಗ್ರಾಮದ ಸುತ್ತಮುತ್ತ ಐದು ಹಾಡಿಗಳು ಇದ್ದು, ಇಲ್ಲಿ ಸಾಮಾನ್ಯವಾಗಿ ರಕ್ತ ಕಡಿಮೆ ಇರುವವರು ಹಾಗೂ ಚರ್ಮ ರೋಗಗಳು ಹೆಚ್ಚಾಗಿ ಇರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಸಂಸ್ಥೆಯ ಉದ್ದೇಶ ಹಾಗೂ ಈ ಶಿಬಿರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ವ್ಯೆದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆ ಮಡಿಕೇರಿಗೆ ಬರಲು ಸೂಚಿಸಲಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ಪ್ರಸ್ತುತ ಪ್ರತಿ ದಿನ ಸುಮಾರು 1000 ಕ್ಕಿಂತ ಹೆಚ್ಚಿನ ಹೊರರೋಗಿಗಳು ಹಾಗೂ ಪ್ರತಿ ತಿಂಗಳು 3000 ಒಳ ರೋಗಿಗಳು ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಾಡಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಯೋಜನೆಯ ಎಲ್ಲಾ ಚಿಕಿತ್ಸೆಗಳನ್ನು ನಮ್ಮ ಸಂಸ್ಥೆಯಲ್ಲಿ ನೀಡಲಾಗುತ್ತಿದ್ದು, ತೃತೀಯ ಹಂತದ ರೋಗಗಳಾದ ಹೃದಯ, ಮೂತ್ರಪಿಂಡ, ಕ್ಯಾನರ್ ಗೆ ಸಂಬಂಧಿಸಿದಂತೆ ಅಗತ್ಯ ವೈದ್ಯಕೀಯ ಸೇವೆಯನ್ನು ಒಳಪಡಿಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ಮಾತನಾಡಿ, ನಮ್ಮ ಸಂಸ್ಥೆಯ ಸುತ್ತಮುತ್ತ ಹಾಡಿಗಳು ಮತ್ತು ತೋಟದ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಈ ರೀತಿಯ ಆರೋಗ್ಯ ಶಿಬಿರಗಳು ತುಂಬಾ ಪ್ರಯೋಜನಾಕಾರಿಯಾಗಲಿದೆ ಹಾಗೂ ಈ ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಕೋರಿದರು.
ಶಿಬಿರದಲ್ಲಿ ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಉಚಿತ ಆಯುಷ್ಮಾನ್ ಕಾರ್ಡ್ ಗಳ ನೋಂದಣಿ, ಉಚಿತ ಯುಡಿಐಡಿ ನೋಂದಣಿ, ದೇಹದಾನ, ನೇತ್ರದಾನ, ಅಂಗಾಂಗ ದಾನ ಕುರಿತು ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಆರೋಗ್ಯ ಮಿತ್ರರಾದ ದಿಲೀಪ್ ಹಾಗೂ ದಿನೇಶ್ ಮಾಹಿತಿ ನೀಡಿದರು.
ಆಯುಷ್ಮಾನ್ ಭವ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರಾಮಚಂದ್ರ ಕಾಮತ್, ಸಮುದಾಯ ವೈದ್ಯಶಾಸ್ತ್ರದ ಡಾ.ಮಹೇಶ್, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ್, ಕಿವಿ ಮೂಗು ಗಂಟಲು ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ, ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ.ಕೃಪಾಲಿನಿ, ಶಸ್ತ್ರ ಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗ್ರಿಷ್ಮ ಹಾಗೂ ವ್ಯೆದ್ಯಕೀಯ ಕಾಲೇಜಿನ ವ್ಯೆದ್ಯರು, ವ್ಯೆದ್ಯಕೀಯ ವಿದ್ಯಾರ್ಥಿಗಳು, ಅರೆ ವ್ಯೆದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ವ್ಯೆದ್ಯರು ಹಾಗೂ ಸಿಬ್ಬಂದಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಮಾಲ್ದಾರೆ, ಸಿದ್ದಾಪುರ, ಚೆಟ್ಟಳ್ಳಿ, ಅಮತ್ತಿ ವ್ಯಾಪ್ತಿಯ ಸಾರ್ವಜನಿಕರು ಪಾಲ್ಗೊಂಡಿದ್ದರು. ದಂತ ವ್ಯೆದ್ಯಾಧಿಕಾರಿ ಡಾ. ರೇವಣ್ಣ ಸ್ವಾಗತಿಸಿ, ವಂದಿಸಿದರು.









