ಮಡಿಕೇರಿ ಅ.10 : ಮುಂದಿನ ಪೀಳಿಗೆಗಾಗಿ ನಾವು ಅಳಿವಿನಂಚಿನಲ್ಲಿರುವ ಜೀವ ಪ್ರಭೇದಗಳನ್ನು ಸಂರಕ್ಷಿಸುವ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ನಾವು ಪಣ ತೊಡಬೇಕಿದೆ ಎಂದು ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ ಹೇಳಿದರು.
ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಇಕೋ ಕ್ಲಬ್ ವತಿಯಿಂದ ನಮ್ಮ ನಡೆ ಪರಿಸರದೆಡೆಗೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ 69ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ : 2023 ಕಾರ್ಯಕ್ರಮದಲ್ಲಿ ಮಕ್ಕಳಿಗೆ ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು.
ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು.
ವನ್ಯಜೀವಿ ಸಪ್ತಾಹದ ಉದ್ದೇಶ ಹಾಗೂ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿ ಮಕ್ಕಳೊಂದಿಗೆ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಸಂವಾದ ನಡೆಸಿದ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಅರಣ್ಯ ಮತ್ತು ವನ್ಯಜೀವಿಗಳು ಸಹಾಯ ಮಾಡುತ್ತವೆ. ನಾವು ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂದರು.
ವನ್ಯಜೀವಿಗಳ ನಿರಂತರ ಅವನತಿಗೆ ಪ್ರಮುಖ ಕಾರಣವೆಂದರೆ ಮಾನವನ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ದುರಾಶೆಗಳು ಅರಣ್ಯನಾಶ ಮತ್ತು ಆವಾಸಸ್ಥಾನದ ನಾಶಕ್ಕೆ ಕಾರಣವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಡಿನಲ್ಲಿ ವಾಸಿಸುವ ಪ್ರಾಣಿಗಳು, ಪಕ್ಷಿಗಳು, ಕೀಟಗಳು ಇತ್ಯಾದಿಗಳನ್ನು ಒಳಗೊಂಡಿರುವ ವನ್ಯಜೀವಿಗಳು ರಾಷ್ಟ್ರೀಯ ಸಂಪನ್ಮೂಲವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದರು. ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಟಿ.ಜಿ.ಪ್ರೇಮಕುಮಾರ್ ಉತ್ತರಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ವಿನೋದ ತುಂಬಿದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ನಂತರ ಗ್ರಾಮದಲ್ಲಿ ನಡೆಸಿದ ಜಾಗೃತಿ ಅಭಿಯಾನದಲ್ಲಿ ಶಾಲಾ ಶಿಕ್ಷಕರಾದ ಜಿ.ನಳಿನಿ ಟಿ.ಆರ್.ಉಷಾ, ಎಚ್.ಪಿ.ರೂಪಾ ಇದ್ದರು.
ಗ್ರಾಮದಲ್ಲಿ ನಡೆದ ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ವಿವಿಧ ಘೋಷಣಾ ಫಲಕಗಳನ್ನು ಹಿಡಿದು ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.









