ಮಡಿಕೇರಿ ಅ.10 : ಬಾಳೆಲೆ ಕಾಲೇಜು ಕ್ರೀಡಾಂಗಣದಲ್ಲಿ ಬಿರ್ಸಾಮುಂಡ ಸಮಿತಿ ವತಿಯಿಂದ ನಡೆದ ಹಗ್ಗಜಗ್ಗಾಟ ಮುತ್ತು ತಟ್ಟೆಬಿಲ್ಲು ಸ್ಪರ್ಧೆಗೆ ಯರವ ಸಮುದಾಯದ ದೈವಾರಾಧಕ ಮುತ್ತ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಬುಡಕಟ್ಟು ಸಾಮಾಜಿಕ ಹೋರಾಟಗಾರ ಗಪ್ಪು ಮಾತನಾಡಿ ಗಿರಿಜನ ಹಾಡಿಯ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಜೊತೆಗೆ
ಬುಡಕಟ್ಟು ಜನರ ಶ್ರೀಮಂತ ಸಾಂಸ್ಕೃತಿಯನ್ನು ಉಳಿಸುವಂತೆ ಕರೆ ನೀಡಿದರು.
ಬಿರ್ಸಾಮುಂಡ ಸಮಿತಿಯ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ನಿಟ್ಟೂರು ಗ್ರಾ.ಪಂ ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ನಿವೃತ್ತ ಯೋಧ ಕಾಳ, ಗಿರಿಜನ ಮುಖಂಡರುಗಳಾದ ಗಪ್ಪು, ಅಪ್ಪಾಜಿ, ತಟ್ಟಕೆರೆ ದಾಸಪ್ಪ, ಬಿರ್ಸಾಮುಂಡ ಸಮಿತಿಯ ಕಾರ್ಯದರ್ಶಿ ದಿನೇಶ್ ತಿತಿಮತಿ, ಸಂಚಾಲಕ ಮಾಚಿಮಾಡ ರವೀಂದ್ರ, ನಿರ್ದೇಶಕರಾದ ಮುರುಗೇಶ್, ಕಾಯರ ಕಿರಣ್ ಹಾಜರಿದ್ದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬುಡಕಟ್ಟು ಸಮುದಾಯದ ನಾಟಿ ವೈದ್ಯ ಲೋಕೇಶ್, ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆಗಾಗಿ ಪಿ.ಸಿ.ಕಾಳ, ದೈವಾರಾಧಕರಾದ ಪಣಿಯ ಮುತ್ತ ಮುತ್ತೂರು, ಸೋಮ, ಚಿಕ್ಕಣ್ಣ, ಸುಬ್ರಮಣಿ, ಸಮಾಜ ಸೇವೆಗೆ ಪಿ.ಚಂದ, ಕೃಷಿ ಮತ್ತು ತೋಟಗಾರಿಕೆ ಬೆಂಡೆಕುತ್ತಿ ಮುತ್ತ, ಸಮಾಜಿಕ ಹೋರಾಟಗಾರ ಗಪ್ಪು, ನಾಟಿ ವೈದ್ಯರಾದ ನೀಲಿ, ಕೋವಿಡ್ ಸಂದರ್ಭದಲ್ಲಿನ ಸೇವೆಗಾಗಿ ಗೌರಮಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ನಡೆದ ಹಗ್ಗ ಜಗ್ಗಾಟ ಪುರುಷರ ಸ್ಪರ್ದೆಯಲ್ಲಿ ಲವೆಂತ್ ಮೈಲ್ ತಿತಿಮತಿ ಪ್ರಥಮ, ದ್ವಿತೀಯ ಕಾನೂರು ಬ್ರಹ್ಮಗಿರಿ ವಾರಿಯರ್ಸ್, ಮಹಿಳಾ ವಿಭಾಗದಲ್ಲಿ ಪ್ರಥಮ ಗೋಪಮ್ಮ ಫ್ರೆಂಡ್ಸ್ ತೋಮರ ಕೆದಂಬಳ್ಳೂರು, ದ್ವಿತೀಯ ಲವೆಂತ್ ಮೈಲ್ ತಿತಿಮತಿ, ಮಹಿಳಾ ಮ್ಯೂಸಿಕಲ್ ಚೇರ್ ನಲ್ಲಿ ಪ್ರಥಮ ಸುಮಿತ್ರಾ, ದ್ವಿತೀಯ ಗೋಪಮ್ಮ, ತೃತೀಯ ಲಲಿತಾ ಸ್ಥಾನ ಪಡೆದುಕೊಂಡರು.
ಸಾರ್ವಜನಿಕರ ಪ್ರದರ್ಶನಕ್ಕಾಗಿ ನಡೆದ ತಟ್ಟೆ ಬಿಲ್ಲು ಸ್ಪರ್ಧೆಯಲ್ಲಿ ಐವತ್ತಕ್ಕೂ ಹೆಚ್ಚು ಸ್ಪರ್ದಿಗಳು ಭಾಗವಹಿಸಿ ಸಂಭ್ರಮಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಕಾಶ್ ವಹಿಸಿದ್ದರು, ಗಿರಿಜನ ಮುಖಂಡರಾದ ಕುಡಿಯರ ಗೋಪಮ್ಮ ನಿಟ್ಟೂರು ಕಾಳ, ಗೌರಮಣೆ, ಚಕ್ಕೇರ ಮನು ಕಾವೇರಪ್ಪ, ಅಳಮೇಂಗಡ ಬೋಸ್ ಮಂದಣ್ಣ, ಕೊಟ್ಟಂಗಡ ಮಧು ಮಂಜುನಾಥ್ ಹಾಜರಿದ್ದರು.









