ಮಡಿಕೇರಿ ಅ.10 : ಉಪನ್ಯಾಸಕರ ನೇಮಕ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕೊಡಗು ವಿಶ್ವ ವಿದ್ಯಾನಿಲಯ ರಚನೆಯಾದ ನಂತರ ನಮಗೆ ತೊಂದರೆಗಳು ಎದುರಾಗಿದ್ದು, ಶೈಕ್ಷಣಿಕ ಪ್ರಗತಿಗೆ ಅಡಚಣೆಯಾಗಿದೆ. ಕಾಲೇಜ್ ಗೆ 93 ಉಪನ್ಯಾಸಕರ ಅಗತ್ಯವಿದ್ದು, ಕೇವಲ 43ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಠವನ್ನು ಮಾಡದೆ ಪರೀಕ್ಷೆ ಮಾಡಲಾಗುತ್ತಿದೆ, ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಲ್ಯಾಬ್ ನಲ್ಲಿ ಸೌಲಭ್ಯದ ಕೊರತೆ ಇದೆ ಮತ್ತು ಹಾಸ್ಟೆಲ್ ವ್ಯವಸ್ಥೆ ಇಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದರು.
ಸಮಸ್ಯೆಗಳ ಕುರಿತು ಕಾಲೇಜು ಆಡಳಿತ ಮಂಡಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಉಪನ್ಯಾಸಕರ ನೇಮಕ ಸೇರಿದಂತೆ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ತರಗತಿಗೆ ಹಾಜರಾಗುವುದಿಲ್ಲವೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೊಡಗು ವಿವಿ ಕುಲಪತಿ ಅಶೋಕ್ ಸಂಗಪ್ಪ ಆಲೂರ ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಸೀನಪ್ಪ ಅವರುಗಳು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು.
ಕೊಡಗು ವಿಶ್ವ ವಿದ್ಯಾನಿಲಯ ಹೊಸದಾಗಿ ಸ್ಥಾಪನೆಯಾಗಿದೆ, ಸರ್ಕಾರದ ಮಟ್ಟದಲ್ಲೇ ಎಲ್ಲಾ ವ್ಯವಸ್ಥೆಗಳು ಆಗಬೇಕಾಗಿದೆ. ಸಮಸ್ಯೆಗಳ ಪರಿಹಾರ ಮತ್ತು ಸೌಲಭ್ಯ ದೊರಕಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮತ್ತೊಮ್ಮೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.








