ಮಡಿಕೇರಿ ಅ.10 : ಜಾಗತಿಕವಾಗಿ ಕೊರೊನಾ ಬಳಿಕ 8 ಜನರಲ್ಲಿ ಒಬ್ಬರಿಗೆ ಮಾನಸಿಕ ಅಸ್ವಸ್ಥತೆ ಕಂಡುಬರುತ್ತಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಎನ್.ಆನಂದ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ, ಮಡಿಕೇರಿ, ಎಸ್‍ವಿವೈಎಂ, ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯು ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು’ ಎಂಬ ಘೋಷವಾಕ್ಯದಡಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಭೋದಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಮನುಷ್ಯನಿಗೆ ತುಂಬಾ ಮುಖ್ಯ. ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಸಮಾಜದ ಸ್ಥಿತಿಗತಿಗಳಲ್ಲಿ ಏರುಪೇರು ಉಂಟಾಗುತ್ತದೆ. ಸಮಾಜದ ಒಳಿತಿಗೆ ಮಾನಸಿಕ ಖಾಯಿಲೆಗೆ ತಕ್ಕಂತೆ ಔಷಧಿ ಹಾಗೂ ಸಲಹೆ-ಸೂಚನೆ ದೊರಕಬೇಕು. ಮಾನಸಿಕ ರೋಗ ಲಕ್ಷಣ ಇರುವಂತಹ ವ್ಯಕ್ತಿಗಳನ್ನು ಪತ್ತೆಹಚ್ಚಿ ಧೈರ್ಯ ತುಂಬುವ ಹಾಗೂ ಔಷಧೋಪಚಾರಗಳಿಗೆ ಒಪ್ಪಿಸುವ ಕಾರ್ಯಗಳು ತುರ್ತಾಗಿ ನಡೆಯಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಅವರು ಮಾತನಾಡಿ ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮವು 1992 ರಲ್ಲಿ ಆಫ್ರಿಕಾದಲ್ಲಿ ಆರಂಭವಾಯಿತು. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಇದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಗೂ ಅವರದೇ ಆದ ಘನತೆ, ಗೌರವದಿಂದ ಬದುಕುವ ಹಕ್ಕಿದೆ. ಮಾನಸಿಕ ಅಸ್ವಸ್ಥರನ್ನು ತಾರತಮ್ಯ ಮಾಡುವಂತಿಲ್ಲ. ಕಾನೂನಿನ ಅಡಿಯಲ್ಲಿ ಸರ್ವರೂ ಸಮಾನವರು. ಆ ನಿಟ್ಟಿನಲ್ಲಿ ಮುಖ್ಯವಾಹಿನಿಗೆ ತರುವುದು ಅತೀ ಮುಖ್ಯವಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ವಿಶಾಲ್ ಕುಮಾರ್ ಅವರು ಮಾತನಾಡಿ ಮಾನಸಿಕ ಆರೋಗ್ಯ ಸಮಸ್ಯೆ ಮುಜುಗರ ಪಡುವಂತಹ ಸಮಸ್ಯೆ ಅಲ್ಲ, ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯವಾದರೆ ಗೌಪ್ಯವಾಗಿಟ್ಟುಕೊಂಡಷ್ಟು ಸಮಸ್ಯೆ ಉಲ್ಬಣಿಸುತ್ತದೆ. ಸಮಸ್ಯೆಯನ್ನು ಹೋಗಲಾಡಿಸಲು ಹಲವಾರು ಮಾರ್ಗೋಪಾಯಗಳನ್ನು ಮನೋವೈದ್ಯರು ನೀಡುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾದವರು ವೈದ್ಯರ ಬಳಿ ಆಪ್ತ ಸಮಾಲೋಚನೆ ನಡೆಸಲು ಅವಕಾಶವಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಡಿವೈಎಸ್‍ಪಿ ಜಗದೀಶ್ ಅವರು ಮಾತನಾಡಿ ಮಾನಸಿಕ ಅಸ್ವಸ್ಥರ ಸಮಸ್ಯೆಗಳನ್ನು ನಿವಾರಿಸಲು ಪೆÇಲೀಸ್ ಹಾಗೂ ಕಾನೂನು ವಿಭಾಗಕ್ಕೆ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಗಳ ಅಪರಾಧ ಪರಿಗಣಿಸಿ ಪ್ರತ್ಯೇಕವಾಗಿ ಚಿಕಿತ್ಸೆ ಕೊಡಿಸಬೇಕಾಗುವುದು. ಮಾನಸಿಕ ಆರೋಗ್ಯ ಮನುಷ್ಯನ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡೇವಿನ್ ಲಿನೇಕರ್ ಕರ್ಕಡ ಅವರು ಮಾತನಾಡಿ 2016 ರಿಂದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಮಾನಸಿಕ ಆರೋಗ್ಯದ ಘಟಕ ಆರಂಭಿಸಲಾಗಿದೆ ಎಂದರು.
ವಿಶ್ವಸಂಸ್ಥೆಯು 2023-24 “ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು” ಎಂಬ ಘೋಷ ವಾಕ್ಯ ದಡಿಯಲ್ಲಿ ನಡೆಸುತ್ತಿರುವ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯೂ ನಮ್ಮ ಮನಸ್ಸು ನಮ್ಮ ಹಕ್ಕು ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಹಿಡಿತಕ್ಕೆ ಸಿಗದೆ ಅಸಾಧ್ಯವಾದಾಗಲೇ ಮಾನಸಿಕ ಆರೋಗ್ಯ ಸಮಸ್ಯೆಯೂ ಕಾಣಿಸುವುದು ಎಂದರು.
ಖಿನ್ನತೆ, ಆತಂಕ, ಮನೋಬಲ ಸದೃಢವಾಗಿಲ್ಲದೆ ಇರುವ ವ್ಯಕ್ತಿಗಳು ಆತ್ಮಹತ್ಯೆಗೆ ಒಳಗಾಗುವುದನ್ನು ಗಮನಿಸಬಹುದು. ಇಂತಹ ಮಾನಸಿಕ ಖಿನ್ನತೆಯಿಂದ ಹೊರಬರಲು ಜೀವನ ಶೈಲಿ, ಊಟೋಪಚಾರ, ವ್ಯಾಯಾಮದ ಅಗತ್ಯತೆ ಬಹಳ ಮುಖ್ಯವಾಗಿದೆ ಎಂದರು.
ದುಶ್ಚಟಗಳು ಕೂಡ ಮಾನಸಿಕ ರೋಗವನ್ನು ಉಲ್ಬಣ ಮಾಡುವುದು ದುಶ್ಚಟದಿಂದ ಹೊರಬರಲು ವ್ಯಸನಿಗಳು ಹಲವಾರು ಸರ್ಕಾರೇತರ ಸಂಸ್ಥೆಗಳ ಮೊರೆ ಹೋಗಬಹುದು. ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕ ಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾಗಿರುವ (ಉಚಿತ ಸಹಾಯವಾಣಿ-14416) ವಿಭಾಗಕ್ಕೆ ಕರೆ ಮಾಡಿ ಆಪ್ತ ಸಮಾಲೋಚನೆ ನಡೆಸಬಹುದು ಎಂದು ಡೇವಿನ್ ಲಿನೇಕರ್ ಕರ್ಕಡ ಅವರು ಮಾಹಿತಿ ನೀಡಿದರು.
ಮಾನಸಿಕ ಖಿನ್ನತೆಯಿಂದ ಗುಣಮುಖರಾದ ನಂತರ ಸರ್ಕಾರ ಅಸ್ವಸ್ಥರಿಗೆ ಕೂಡ ಪಿಂಚಣಿ ಮೂಲಕ ಸಹಾಯಮಾಡುತ್ತದೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳಿಗೆ ಸರ್ಕಾರ ಕಾನೂನಾತ್ಮಕವಾಗಿಯೂ ಆಸ್ತಿ ವ್ಯವಹಾರದಲ್ಲಿಯೂ ಸಹಾಯ ಮಾಡುತ್ತದೆ. ಮಾದಕ ವಸ್ತುವಿನ ಅವಲಂಬನೆ, ನಿದ್ರಾಹೀನತೆ, ಹೆಚ್ಚು ಆಹಾರ ಸೇವನೆ ಮುಂತಾದ ಪ್ರತಿಯೊಂದು ಸಮಸ್ಯೆಗೆ ವೈದ್ಯರು ಪರಿಹಾರ ನೀಡುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಗ್ರಾಮ ಆರೋಗ್ಯ ಕಾರ್ಯಕ್ರಮದ ಸಂಯೋಜಕಿ ಬ್ರೋಹಿಶಿ.ಆರ್ ಮಾತನಾಡಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಮಾನಸಿಕ ಆರೋಗ್ಯ, ಕ್ಷಯ, ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತ ಹೀನತೆ, ಅಪೌಷ್ಟಿಕತೆ ಆರೋಗ್ಯ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳನ್ನು ನೇಮಿಸಿ ಪರಿಶೀಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಆರೋಗ್ಯ ಕಾರ್ಯಕ್ರಮದ ಉಚಿತ ಸಹಾಯವಾಣಿ ಸಂಖ್ಯೆ 18005324600 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು, ನಸಿರ್ಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಮತ್ತಿತರರು ಇದ್ದರು.








