ಮಡಿಕೇರಿ ಅ.17 : ಡಿವೈನ್ ಪಾರ್ಕ್ ಸಂಸ್ಥೆಯ ಅಂಗ ಸಂಸ್ಥೆಯಾದ ಮೂರ್ನಾಡು ವಿವೇಕ ಜಾಗ್ರತ ಬಳಗದ ವತಿಯಿಂದ ಅತ್ಯಪರೂಪದ ಆತ್ಮೋನ್ನತಿ ಶಿಬಿರ ನಡೆಯಿತು.
ಮರಗೋಡಿನ ಗೌಡ ಸಮಾಜದಲ್ಲಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಡಿವೈನ್ ಪಾರ್ಕ್‍ನ ಅಧಿಕಾರಿಗಳಾದ ಪ್ರೇಮಾ ಪ್ರಭಾಕರ್ ಹಾಗೂ ರಾಜೇಶ್ ನಾಯರ್ ಆತ್ಮೋನ್ನತಿ ಕುರಿತು ವಿವರಿಸಿದರು.
ಪ್ರತಿಯೊಬ್ಬ ವ್ಯಕ್ತಿ ವ್ಯಕ್ತಿತ್ವ ನಿರ್ಮಾಣದೆಡೆಗೆ ಸಾಗುವ ಪರಿ ಮತ್ತು ಮನುಷ್ಯ ಜನ್ಮದ ಪಾವಿತ್ರ್ಯತೆ ಬಗ್ಗೆ ಅರಿತುಕೊಳ್ಳಬೇಕು. ಭಗವಂತನಿಗೆ ಮೊದಲ ಆದ್ಯತೆ ನೀಡಿ ತನ್ನ ಪಾಲಿಗೆ ಒದಗಿದ ಕರ್ತವ್ಯಗಳನ್ನು ಅತ್ಯಂತ ಪ್ರೀತಿಯಿಂದ ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಂಡರೆ ಜೀವನ ಜೇನಾಗುತ್ತದೆ. ಸಂತೃಪ್ತಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೂರ್ನಾಡು ವಿವೇಕ ಜಾಗ್ರತ ಬಳಗದ ಅಧ್ಯಕ್ಷೆ ದಿವ್ಯ ತೇಜ ಕುಮಾರ್, ಉಪಾಧ್ಯಕ್ಷ ಯಶವಂತ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶೃತಿ ಸ್ವಾಗತಿಸಿ, ಬಿ.ಜಿ.ಸೌಮ್ಯ ವಂದಿಸಿದರು. ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









