ಮಡಿಕೇರಿ ಅ.18 : ಸಾಹಿತ್ಯ ರಚನೆಯ ಮೂಲಕ ಪ್ರಾದೇಶಿಕ ಭಾಷಾ ಸಂಸ್ಕೃತಿಯ ಬೆಳವಣಿಗೆ ಸಾಧ್ಯವಿದೆ. ಆದ್ದರಿಂದ ಕವಿಗೋಷ್ಠಿ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ಭಾಷೆಗಳಲ್ಲೂ ಕವನ, ಸಾಹಿತ್ಯ ಕೃಷಿ ವಿಫುಲವಾಗಿ ನಡೆಯಬೇಕಾಗಿದೆ ಎಂದು “ಕಾಂತಾರ” ಚಲನಚಿತ್ರದ ಗೀತ ರಚನಾಕಾರರು ಹಾಗೂ ಸೈಮಾ ಪ್ರಶಸ್ತಿ ವಿಜೇತ ಪ್ರಮೋದ್ ಮರವಂತೆ ಕರೆ ನೀಡಿದ್ದಾರೆ.
ಮಡಿಕೇರಿ ನಗರ ದಸರಾ ಸಮಿತಿಯ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ‘ಕಲಾ ಸಂಭ್ರಮ’ ವೇದಿಕೆಯಲ್ಲಿ ನಡೆದ ‘ಬಹುಭಾಷಾ ಕವಿಗೋಷ್ಠಿ’ಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‍ಗಳಲ್ಲಿ ಮಕ್ಕಳು ಮುಳುಗಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಗಳ ನಡುವೆಯೂ ಬರಹಗಾರರು ಹಾಗೂ ಅದನ್ನು ಓದುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಅವರನ್ನು ಒಗ್ಗೂಡಿಸುವ ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ಕಡಿಮೆಯಾಗಿದೆ. ಹೆಚ್ಚು ಹೆಚ್ಚಾಗಿ ಇಂತಹ ಸಾಹಿತ್ಯ ಪರವಾದ ಕಾರ್ಯಕ್ರಮಗಳು ನಡೆಸುವ ಮೂಲಕ ಬರಹಗಾರರಿಗೆ ಪ್ರೇರಣೆ ನೀಡಬೇಕು ಎಂದರು.
ತಾನು ಕುಂದಾಪುರ ಮೂಲದವನಾಗಿದ್ದು, ಅಲ್ಲಿನ ಕುಂದಾಪುರ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ವಿರಳ. ಇಂತಹ ಕವಿಗೋಷ್ಠಿ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ಭಾಷೆಗಳಲ್ಲೂ ಕವನ ಸಾಹಿತ್ಯ ಕೃಷಿ ವಿಫುಲವಾಗಿ ನಡೆಯಬೇಕಾಗಿದೆ. ಆ ಮೂಲಕ ಪ್ರಾದೇಶಿಕ ಭಾಷಾ ಬೆಳವಣಿಗೆಯನ್ನು ಕಾಣಬಹುದೆಂದು ಪ್ರಮೋದ್ ಮರವಂತೆ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ದೇಹದ ಮೇಲಿನ ಕಾಳಜಿಯನ್ನು ನಾವು ನಮ್ಮ ಮೆದುಳು ಮತ್ತು ಮನಸ್ಸಿನ ಕಾಳಜಿಯ ಬಗ್ಗೆ ತೋರುತ್ತಿಲ್ಲವೆಂದು ಅಭಿಪ್ರಾಯಿಸಿದ ಅವರು, ದಿನಕ್ಕೊಂದು ಪತ್ರಿಕೆಗಳನ್ನು ಮನೆಗೆ ತರಿಸಿಕೊಳ್ಳಲು ಹಿಂದೇಟು ಹಾಕುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಇನ್ನು ಮುಂದಾದರು ಪ್ರತಿ ಮನೆ ಮನೆಗಳಲ್ಲಿ ಕನಿಷ್ಟ ಒಂದಾದರು ದಿನಪತ್ರಿಕೆಗಳನ್ನು ತರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಲ್ಲಿ, ಅಕ್ಷರಗಳತ್ತ ಮಕ್ಕಳಲ್ಲಿ ಒಲವು ಮೂಡಲು ಸಾಧ್ಯವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ರೂಪಿಸುವ ಪ್ರಯತ್ನ ನಡೆಯಲೆಂದು ತಿಳಿಸಿದರು.
ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರು ಹಾಗೂ ಅಂಕಣಕಾರ ಹೆಚ್.ಎಸ್.ಚಂದ್ರಮೌಳಿ, ಬದುಕಿನ ಪಯಣದಲ್ಲಿ, ಸಾಹಿತ್ಯ, ಕಲೆ, ಸಂಸ್ಕøತಿಗಳು ಮನುಷ್ಯನಿಗೆ ಪರಿಪೂರ್ಣ ವ್ಯಕ್ತಿತ್ವವನ್ನು ನೀಡುತ್ತದೆ. ತಮ್ಮೊಳಗಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಕವನಗಳು ಸಮಾಜದ ಅರೆ ಕೊರೆಗಳನ್ನು ತಿದ್ದಿ, ಉತ್ತಮ ಸಂದೇಶ ನೀಡುವ ಮಾಧ್ಯಮವೂ ಹೌದೆಂದು ಅಭಿಪ್ರಾಯಪಟ್ಟರು.
ನಮ್ಮ ಆಂತರ್ಯದ ಭಾವನೆ, ನೋವು ನಲಿವುಗಳನ್ನು ಅಕ್ಷರಗಳ ಸಾಲಿಗೆ ಇಳಿಸುವಾತ ಕವಿ ಎನಿಸಿಕೊಳ್ಳುತ್ತಾನೆ. ತನ್ನ ವಕೀಲಿ ವೃತ್ತಿಯ ಸಂದರ್ಭದಲ್ಲಿ ತಾನು ಕಂಡ ಕೈದಿಗಳ ನೋವು ನಲಿವು, ಅವರ ಭಾವನೆಗಳು ತನ್ನನ್ನು ಅಂಕಣಕಾರನನ್ನಾಗಿ ರೂಪಿಸಿತೆಂದು ಇದೇ ಸಂದರ್ಭ ತಮ್ಮ ಅನುಭವಗಳನ್ನು ಹಂಚಿಕೊಂಡರು.
::: ‘ಕಾವ್ಯೋದ್ಭವ’ ಕವನ ಸಂಕಲನ ಅನಾವರಣ :::
ಬಹುಭಾಷಾ ಕವಿಗೋಷ್ಠಿಯಲ್ಲಿ ಕವನಗಳ ವಾಚನಕ್ಕೆ ಆಯ್ಕೆಯಾದ ಕವನಗಳ ಸಂಕಲನ ‘ಕಾವ್ಯೋದ್ಭವ’ವನ್ನು ಕವಿಗೋಷ್ಠಿಯ ಅಧ್ಯಕ್ಷ ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ಅತಿಥಿಗಣ್ಯರೊಂದಿಗೆ ಅನಾವರಣಗೊಳಿಸಿದರು.
ಮಡಿಕೇರಿ ನಗರಸಭಾ ಅಧ್ಯಕ್ಷರು ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಕವಿಗಳ ಕವನಗಳು ಸಮಾಜದ ಅರೆ ಕೊರೆಗಳ ಮೇಲೆ ಸಮರ್ಥವಾಗಿ ಬೆಳಕನ್ನು ಚೆಲ್ಲಬಲ್ಲುದು ಎಂದು ಅಭಿಪ್ರಾಯಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲು ಕವಿಗಳು ತಮ್ಮ ಕವನಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಶ್ ನಾಣಯ್ಯ ಮಾತನಾಡಿ, ಸಂಕಷ್ಟಗಳ ಕುಲುಮೆಯಲ್ಲಿ ಮಿಂದೆದ್ದು ಬರುವಾತ ಅತ್ಯುತ್ತಮ ಕವಿಯಾಗಿ ರೂಪುಗೊಳ್ಳುತ್ತಾನೆಂದು ಅಭಿಪ್ರಾಯಿಸಿ, ಕವಿಗೋಷ್ಠಿಗೆ ಶುಭ ಕೋರಿದರು.
ಕೊಡಗು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷರಾದ ಗಿರೀಶ್ ಮಲ್ಲಪ್ಪ ಮೋರಿಕಲ್ಲು ಮಾತನಾಡಿ, ಬದುಕಿನಲ್ಲಿ ಗಳಿಕೆಯೊಂದೇ ಮಹತ್ವವನ್ನು ಪಡೆಯಬಾರದು. ಗಳಿಸಿದ್ದನ್ನು ಸಮಾಜದಲ್ಲಿರುವ ಬಡವ ಬಲ್ಲಿದರಿಗೆ ವಿನಿಯೋಗಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕೆಂದರು. ಕೊಡಗಿನಲ್ಲಿ ಪ್ರಶ್ನಿಸುವ ಮನೋಭಾವದ ಕೊರತೆಯಿಂದ ಅಭಿವೃದ್ಧಿಯ ದೃಷ್ಟಿಯಿಂದ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗಿಲ್ಲವೆ0ದು ಅನಿಸಿಕೆ ವ್ಯಕ್ತಪಡಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಮಾತನಾಡಿ, ನಾಡಿನ ವಿವಿಧೆಡೆಗಳಿಂದ ಇನ್ನೂರಕ್ಕೂ ಹೆಚ್ಚಿನ ಕವನಗಳು ಬಹುಭಾಷಾ ಕವಿಗೋಷ್ಠಿ ಸಮಿತಿಗೆ ಈ ಬಾರಿ ಬಂದಿತ್ತು. ಇವುಗಳನ್ನು ಅತ್ಯಂತ ಪಾರದರ್ಶಕವಾಗಿ ವಿಶೇಷ ತೀರ್ಪುಗಾರರ ಮೂಲಕ ಆಯ್ಕೆ ಮಾಡಿ ಕವನ ಸಂಕಲನವನ್ನು ಹೊರ ತರಲಾಗಿದೆಯೆಂದು ತಿಳಿಸಿದರು.
::: ಸನ್ಮಾನ :::
ಇದೇ ಸಂದರ್ಭ ಪ್ರಮೋದ್ ಮರವಂತೆ, ಡಾ. ಮೇಚಿರ ಸುಭಾಶ್ ನಾಣಯ್ಯ, ಗಿರೀಶ್ ಮಲ್ಲಪ್ಪ ಮೋರಿಕಲ್ಲು ಅವರನ್ನು ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀರಕ್ಷಾ ಪ್ರಭಾಕರ್ ಪ್ರಾರ್ಥಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿ ಅಧ್ಯಕ್ಷರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಅವರ ಪರಿಚಯವನ್ನು ಅನುಷ, ಪ್ರಮೋದ್ ಮರವಂತೆ ಅವರ ಪರಿಚಯವನ್ನು ರಂಜಿತ್ ಕವಲಪಾರ ಮಾಡಿಕೊಟ್ಟರು. ಸಮಿತಿ ಪದಾಧಿಕಾರಿ ವಿಜಯ್ ಹಾನಗಲ್ ವಂದಿಸಿದರು.
::: ಕುವೆಂಪುಗೆ ನಮನ :::
ಬಹುಭಾಷಾ ಕವಿಗೋಷ್ಠಿಯ ಆರಂಭಕ್ಕು ಮೊದಲು ಕವಿಗೋಷ್ಠಿ ಅಧ್ಯಕ್ಷರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಅವರು, ಸಮಿತಿಯ ಪದಾಧಿಕಾರಿಗಳೊಂದಿಗೆ ನಗರದ ಡಿಸಿಸಿ ಬ್ಯಾಂಕ್ ಬಳಿಯ ರಾಷ್ಟ್ರಕವಿ ಕುವೆಂಪು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾವೇರಿ ತಿರ್ಥೋದ್ಭವದ ಪುಣ್ಯ ಕಾಲವಾದ್ದರಿಂದ ಕವಿಗೋಷ್ಠಿಯ ಉದ್ಘಾಟನೆಯ ಸಂದರ್ಭ ಅತಿಥಿಗಳೆಲ್ಲರಿಗು ಸಮಿತಿ ವತಿಯಿಂದ ಕಾವೇರಿ ತೀರ್ಥವನ್ನು ನೀಡಲಾಯಿತು.
Breaking News
- *ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಾಧೀಶೆ ಶುಭ*
- *ವಿರಾಜಪೇಟೆಯಲ್ಲಿ ನ.27 ರಂದು ಕಾವೇರಿ ಕಾರ್ನಿವಾಲ್ ಫೆಸ್ಟ್*
- *ಚೆಟ್ಟಳ್ಳಿ ಗ್ರಾ.ಪಂ ಉಪಚುನಾವಣೆ : ಅಯ್ಯಂಡ್ರ ಭಾಗೀರಥಿ ಗೆಲುವು*
- *ಸಹಕಾರ ತರಬೇತಿ (ಡಿಸಿಎಂ)ಗೆ ಅರ್ಜಿ ಆಹ್ವಾನ*
- *ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ : ಪರಿಸರರೊಂದಿಗೆ ಮಕ್ಕಳು ಬೆಳೆಯಬೇಕು : ಗೀತಾ ಗಿರೀಶ್*
- *ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ : ರಾಷ್ಟ್ರದ ಅಭಿವೃದ್ಧಿಗೆ ಸಂವಿಧಾನ ಪಾತ್ರ ಪ್ರಮುಖ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ*
- *ಪುತ್ತೂರು : ವಿಸಿಇಟಿಯಲ್ಲಿ ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ*
- *ಹೆಬ್ಬೆಟ್ಟಗೇರಿ : ಡಿ.1 ರಂದು ಕೊರಗಜ್ಜ ದೈವದ ಕೋಲೋತ್ಸವ*
- *ವಿರಾಜಪೇಟೆ : ಪ್ರಾಧ್ಯಾಪಕರು ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ*
- *ಮಂಚಳ್ಳಿ ಮತ್ತು ಟಿ.ಶೆಟ್ಟಿಗೇರಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು*