ಮಡಿಕೇರಿ ಅ.18 : ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್ ನಲ್ಲಿ ನಡೆದ ವಿಶ್ವವಿದ್ಯಾನಿಲಯದ 13 ನೇ ಘಟಿಕೋತ್ಸವದಲ್ಲಿ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ಮಂದ್ರೀರ ನಮೃತಾ (ನೀಷ್ಮ) ಅವರು ಚಿನ್ನದ ಪದಕ ಪಡೆದರು.
2020-22 ಶೈಕ್ಷಣಿಕ ವರ್ಷದಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಅವಧಿಯಲ್ಲಿ ಜಲವಾಸಿ ಪ್ರಾಣಿಗಳ ಆರೋಗ್ಯ ನಿರ್ವಹಣೆ ವಿಷಯದಲ್ಲಿ ಅವರು ಪಡೆದ ಅತ್ಯುನ್ನತ ದರ್ಜೆಯ ಅಂಕಗಳಿಗೆ ವಿಶ್ವವಿದ್ಯಾಲಯದ ಚಿನ್ನದ ಪದಕ, ಪ್ರೊ.ಎಚ್.ಪಿ.ಸಿ.ಶೆಟ್ಟಿ ಚಿನ್ನದ ಪದಕ ಮತ್ತು ಪ್ರೊ.ಪಿ.ಟೌರೊ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ನಮೃತಾ ಅವರನ್ನು ಸನ್ಮಾನಿಸಿದರು. ಇವರು ಕಗ್ಗೋಡ್ಲು ಗ್ರಾಮದ ನಿವಾಸಿ ಮಂದ್ರೀರ ರಾಮಕೃಷ್ಣ (ರಾಜ) ಹಾಗೂ ದಿ.ಧನ್ಯವೇಣಿ ಎಂ.ಆರ್ (ವಿನುತ) ಅವರ ಪುತ್ರಿ.









