ಮಡಿಕೇರಿ ಅ.20 : ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ಇವರ ನೇತೃತ್ವದಲ್ಲಿ ನ.14 ರಿಂದ 24 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮತ್ತು 1108 ನಾರಾಯಣ ಕವಚದ ಮಹಾಯಜ್ಞದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ರಥ ಮೂರ್ನಾಡಿಗೆ ಆಗಮಿಸಿತು.
ವಿರಾಜಪೇಟೆಯಿಂದ ಮೂರ್ನಾಡಿಗೆ ಆಗಮಿಸಿದ ರಥಕ್ಕೆ ಶ್ರೀಅಯ್ಯಪ್ಪ ದೇವಾಲಯದ ಬಳಿ ಶ್ರದ್ಧಾಭಕ್ತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಮಾತೃಶಕ್ತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಹೆಚ್‌ಪಿ ಪ್ರಮುಖರು ಗೋ ಸಂರಕ್ಷಣೆ ಮತ್ತು ಗೋ ರಥ ಯಾತ್ರೆ ಕುರಿತು ವಿವರಿಸಿದರು. ಗೋವುಗಳ ಸಂರಕ್ಷಣೆ ಹಿಂದೂಗಳ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಸಿಹಿ ಹಂಚಲಾಯಿತು. ನಂತರ ಗೋವುಗಳ ರಕ್ಷಣೆ ಕುರಿತು ಜಾಗೃತಿ ಮಾತುಗಳನ್ನಾಡಿ ಗೋ ಸಂರಕ್ಷಣಾ ರಥವನ್ನು ಶ್ರದ್ಧಾಭಕ್ತಿಯಿಂದ ಬೀಳ್ಕೊಡಲಾಯಿತು.












