ಬೆಂಗಳೂರು ಅ.28 : 2023ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ 8 ಮಂದಿ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಿದರು.
ನ್ಯಾಯಾಂಗ ಕ್ಷೇತ್ರದಿಂದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ, ಧಾರ್ಮಿಕ ಕ್ಷೇತ್ರದಿಂದ ಮಹಾದೇವಮ್ಮ, ಶಿಕ್ಷಣ ಕ್ಷೇತ್ರದಿಂದ ರಾಮಣ್ಣ ಮಹಾದೇವ ಗಸಿ, ಸಮಾಜ ಸೇವೆ ಕ್ಷೇತ್ರದಿಂದ ಜಿ ಓ ಮಹಾಂತಪ್ಪ, ಸಾಮಾಜಿಕ ಸಂಘಟನೆ ವಲಯದಿಂದ ಸೋಮಣ್ಣ, ವೈದ್ಯಕೀಯ ಕ್ಷೇತ್ರದಿಂದ ಶಾರದ ಪ್ರಭು ಹುಲಿ ನಾಯಕ, ಸಾಹಿತ್ಯ ಕ್ಷೇತ್ರದಿಂದ ಸುಕನ್ಯಾ ಮಾರುತಿ ಹಾಗೂ ರಂಗಭೂಮಿಯಿಂದ ಸುಜಾತಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.